ಬಯಲಾಟ ಜನಪದ ಕಲೆಗಳಲ್ಲೇ ಗಂಡು ಕಲೆ: ದುರ್ಗಾದಾಸ್
ಧಾರವಾಡ 30: ಬಯಲಾಟ ಜನಪದ ಕಲೆಗಳಲ್ಲೇ ಗಂಡು ಕಲೆ. ಇದು ನಮ್ಮ ಗ್ರಾಮೀಣ ಭಾರತದ ಜೀವಾಳ ಎಂದು ಕರ್ನಾಟಕ ಬಯಲಾಟ ಅಕಾಡಮಿ ಅಧ್ಯಕ್ಷ ಡಾ. ಕೆ ಆರ್ ದುರ್ಗಾದಾಸ್ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ.ಟಿ, ಎ.ಟಿ, ಬಿ.ಟಿ ಮತ್ತು ಎಚ್.ಟಿ. ಸಾಸನೂರ ಸಹೋದರರ ಸಂಸ್ಮರಣ ದತ್ತಿ ಅಂಗವಾಗಿ ಆಯೋಜಿಸಿದ್ದ ವಿಶೇಷ ವ್ಯಾಖ್ಯಾನ ಮಾಲೆ 26 ಕಾರ್ಯಕ್ರಮದಲ್ಲಿ ‘ಬಯಲಾಟಗಳು ಹಾಗೂ ಕನ್ನಡ ಭಾಷೆ’ ವಿಷಯಗಳ ಕುರಿತು ಮಾತನಾಡುತ್ತಿದ್ದರು.
ಬಯಲಾಟ ಗ್ರಾಮೀಣ ಅನಕ್ಷರಸ್ಥರ ಮಧ್ಯ ಸೃಷ್ಟಿಯಾದ ಜನಪದ ಕಲೆ. ರೈತಾಪಿ ಜನರು ಸುಗ್ಗಿಯ ನಂತರ ವಿರಾಮದ ವೇಳೆಯಲ್ಲ್ಲಿ, ಜಾತ್ರೆ ಹಾಗೂ ಹಬ್ಬಗಳಲ್ಲಿ ಮನರಂಜನೆಗಾಗಿ ಆಡುವ ಕಲೆಯಾಗಿದೆ. ಬಯಲಾಟ ಯಾವುದೇ ಜಾತಿಗೆ ಸೀಮಿತವಾಗಿಲ್ಲ, ಎಲ್ಲ ಜಾತಿ, ಧರ್ಮದವರನ್ನು ಒಳಗೊಂಡು ಈ ಬಯಲಾಟ ಆಡುವರು. ಉತ್ತರ ಕರ್ನಾಟಕದ ಬಹಳಷ್ಟು ಕಲಾವಿದರು ಬಯಲಾಟದ ಮೂಲಕವೇ ತಮ್ಮ ಕಲಾಪ್ರೌಢಿಮೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬಯಲಾಟದಲ್ಲಿ ಪೌರಾಣಿಕ ಸನ್ನಿವೇಶಗಳೆ ಕಥಾವಸ್ತುಗಳು. ರಾಮಾಯಣ, ಮಹಾಭಾರತದ ಆಯ್ದ ಪ್ರಸಂಗಗಳನ್ನು ಅನಕ್ಷರಸ್ಥ ಕಲಾವಿದರು ಪುಟಗಟ್ಟಲೇ ಕಂಠಪಾಠದ ಮೂಲಕ ಸಂಸ್ಕೃತ ಶ್ಲೋಕವನ್ನೂ ತಮ್ಮ ಸಿರಿಕಂಠದಿಂದ ಅಭಿವ್ಯಕ್ತಗೊಳಿಸುತ್ತಾರೆ. ಬಯಲಾಟಕ್ಕೆ ಸಂಗೀತ, ಹಾಡು, ನೃತ್ಯಗಳೇ ಜೀವಾಳ. ಕಲಾವಿದರ ಸೃಜಶೀಲತೆ ಅಗಾಧವಾದದ್ದು. ಈ ಆಟವು ಅಹೋರಾತ್ರಿ ಆಡುವ ಒಂದು ಜನಪದ ಕಲೆಯಾಗಿದೆ.
ಕರಾವಳಿ ಭಾಗದಲ್ಲಿ ಯಕ್ಷಗಾನವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದ್ದರೆ, ಉತ್ತರ ಕರ್ನಾಟಕದಲ್ಲಿ ಬಹುಪಾಲು ಜಿಲ್ಲೆಗಳಲ್ಲಿ ಬಯಲಾಟಗಳು ಪ್ರದರ್ಶನಗೊಳ್ಳುತ್ತವೆ. ಈ ಬಯಲಾಟಗಳು ಗ್ರಾಮೀಣ ಜನರ ನೈತಿಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಸನ್ಮಾರ್ಗದಲ್ಲಿ ನಡೆಯಲು ಪ್ರೇರೆಪಿಸುತ್ತವೆ. ಬಯಲಾಟ ಅಕಾಡೆಮಿ ಕಲಾವಿದರನ್ನು ಹಾಗೂ ಕಲೆಯನ್ನು ಉಳಿಸಿ ಬೆಳೆಸಲು ಕಾರ್ಯಪ್ರವೃತ್ತವಾಗುತ್ತಿದೆ. ಯುವ ಕಲಾವಿದರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಗದಗದ ಜಾನಪದ ವಿದ್ವಾಂಸ ಡಾ. ಸಿದ್ಧಣ್ಣ ಜಕಬಾಳ ಮಾತನಾಡಿ, ನಮ್ಮಲ್ಲಿ ಶಿಷ್ಟ ಸಾಹಿತ್ಯಕ್ಕಿಂತ ಮೌಖಿಕ ಸಾಹಿತ್ಯವೇ ವಿಫುಲವಾಗಿ ಬೆಳೆದು ಬಂದಿದೆ. ವಿಶೇಷವಾಗಿ ಗ್ರಾಮೀಣ ಜನಪದರಿಂದ ರಚನೆಯಾದ ‘ರಾ್ವಣ’ಗಳು ದೇಶಿ ಕಾವ್ಯದ ಮಾರ್ಗಗಳಾಗಿವೆ. ಜನಪದ ರಂಗಭೂಮಿ ಕರ್ನಾಟಕದಲ್ಲಿ ಸಮೃದ್ಧವಾಗಿ ಬೆಳೆದು ಬಂದ ಒಂದು ವೈವಿಧ್ಯಮಯ ಕಲೆಯಾಗಿದೆ. ಬಯಲಾಟದಲ್ಲಿ ಲಯವೇ ಪ್ರಧಾನವಾದ ಅಂಶ ಎಂದು ಹೇಳಿ ಜನಪದ ಕಲೆಗಳ ಆಯ್ದ ಪ್ರಸಂಗಗಳ ಹಾಡುಗಳನ್ನು ಮನೋಜ್ಞವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಕ.ವಿ.ವ. ಸಂಘದ ಪರವಾಗಿ ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡ ಡಾ. ಕೆ. ಆರ್. ದುರ್ಗಾದಾಸ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ದತ್ತಿದಾನಿಗಳ ಪರವಾಗಿ ಕೆ.ಎಚ್. ಕಾಕನೂರ ದತ್ತಿ ಆಶಯ ಮತ್ತು ಸಾಸನೂರ ಸಹೋದರರ ಕುರಿತು ಮಾತನಾಡಿದರು.
ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ. ಹಿರೇಮಠ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.