ದಾಸಿಮಯ್ಯರ ಜಯಂತಿ: ಸರಳ ಆಚರಣೆಗೆ ನಿರ್ಧಾರ
ಗುಳೇದಗುಡ್ಡ 9: ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಇದೇ ಏಪ್ರೀಲ್ 17 ರಂದು ಬೆಳಿಗ್ಗೆ 10 ಗಂಟೆಗೆ ದೇವರ ದಾಸಿಮಯ್ಯರ ಜಯಂತಿಯನ್ನು ಸರಳವಾಗಿ ಆಚರಿಸಲು ಸೇರಿದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಇಲ್ಲಿನ ಶ್ರೀಮಠದಲ್ಲಿ ಗುರುವಾರ ಸಾಯಂಕಾಲ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ನೇಕಾರ ಸಮಾಜದ ಹಿರಿಯರಾದ ರಂಗಪ್ಪ ಶೇಬಿನಕಟ್ಟಿ ಮಾತನಾಡಿ, ದಾಸಿಮಯ್ಯನವರ ವಚನಗಳು ಮನುಕುಲಕ್ಕೆ ಬೆಳಕು ತೋರಿವೆ. ಅಂತಹ ಮಹಾನುಭಾವರ ವಚನಗಳನ್ನು ಬೆಳಿಗ್ಗೆ ಸ್ನಾನ ಮಾಡಿದ ನಂತರ ಪ್ರಸಾದಕ್ಕಿಂತ ಮುಂಚೆ ಸಮುದಾಯದ ಎಲ್ಲರ ಮನೆಯಲ್ಲಿ ವಚನ ಪಾರಾಯಣ ಮಾಡಿಸಿದರೆ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಸಾನಿಧ್ಯವಹಿಸಿದ್ದ ಶ್ರೀಮಠದ 1008 ಬಸವರಾಜ ಪಟ್ಟದಾರ್ಯ ಶ್ರೀಗಳು ಮಾತನಾಡಿ, ವಚನ ಸಾಹಿತ್ಯಕ್ಕೆ ಅಡಿಪಾಯ ಹಾಕಿದ ದಾಸಿಮಯ್ಯನವರ ವಚನಗಳು ಸಮಾನತೆಯ ಮೌಲ್ಯಗಳಾಗಿವೆ. ಅವುಗಳ ಸ್ವಅನುಷ್ಠಾನ, ಅನುಸಂಧಾನ ಅಗತ್ಯವಾಗಿದೆ. ಅವರ ಸಮಗ್ರ ವಚನಗಳನ್ನು ಪ್ರಕಟಮಾಡಿ ಹಂಚುವುದರ ಮೂಲಕ ಜ್ಞಾನದಾಹವನ್ನು ತಣಿಸಿ ಪುನಿತರಾಗಬೇಕೆಂದು ಹೇಳಿದರಲ್ಲದೇ, ನೂರಾ ಒಂದು ವಚನಗಳ ಚಿಕ್ಕ ಪುಸ್ತಕವನ್ನು 5 ಸಾವಿರ ಪ್ರತಿಗಳಲ್ಲಿ ಮುದ್ರಿಸಿ ಹಂಚುವ ಜವಾಬ್ದಾರಿಯನ್ನು ಸಮಾಜದ ಹಿರಿಯರಿಗೆ ವಹಿಸಿಕೊಟ್ಟರು. ಸರ್ಕಾರದ ಕೋವಿಡ್ ನಿಯಮಾನುಸಾರ ಜಯಂತಿಯನ್ನು ಸರಳವಾಗಿ ಆಚರಿಸಲು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಶಿಲ್ಪಾ ನಾಗರಾಜ ಹಳ್ಳಿ, ನೇಕಾರ ಸಮುದಾಯದ ಅಧ್ಯಕ್ಷ ಈರಣ್ಣ ಶೇಖಾ, ರಂಗಪ್ಪ ಶೇಬಿನಕಟ್ಟಿ, ಸಂಗಪ್ಪ ಜವಳಿ, ಚಂದ್ರಶೇಖರ ತಿಪ್ಪಾಗೌಡ್ರು, ಸೋಮು ಕಲಬುರ್ಗಿ, ಅಮಾತೆಪ್ಪ ಕೊಪ್ಪಳ, ಶ್ರೀಕಾಂತ ಹುನಗುಂದ, ಸಂಗಮೇಶ ಹುನಗುಂದ ಸೇರಿದಂತೆ ದೇವಾಂಗ, ಪಟ್ಟಸಾಲಿ, ಕುರುವಿನಶೆಟ್ಟಿ ನೇಕಾರ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.