ವಿಶೇಷ ವ್ಯಕ್ತಿಯಿಂದ ಗರಡಿ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿಸಿದ ದರ್ಶನ
ರಾಣೆಬೆನ್ನೂರು 02: ಯೋಗರಾಜ್ ಭಟ್ ನಿರ್ದೇಶನದ ಕನ್ನಡ ಚಲನಚಿತ್ರ ಗರಡಿಯ ಟ್ರೈಲರ್ ಬಿಡುಗಡೆ ಸಮಾರಂಭ ಭಾನುವಾರ ಸಂಜೆ ರಾಣೆಬೆನ್ನೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಚಾಲೆಂಜಿಗ್ ಸ್ಟಾರ್ ದರ್ಶನ್ ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡದೆ, ಸಮಾರಂಭಕ್ಕೆ ಬಂದಿದ್ದ ಸಾಮಾನ್ಯ ವ್ಯಕ್ತಿಯೊಬ್ಬರ ಮೂಲಕ ಬಿಡುಗಡೆ ಮಾಡಿಸಿದ್ದಾರೆ. ಸಭಿಕರ ಸಾಲಿನ ಮುಂಭಾಗದಲ್ಲಿ ಕುಳಿತಿದ್ದ, ಸೌಮ್ಯ ಎಂಬ ಯುವತಿಯ ಕೈಯಿಂದ ಗರಡಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿಸಿದ್ದಾರೆ.
ವಿಶೇಷ ವ್ಯಕ್ತಿಯಿಂದ ಟ್ರೈಲರ್ ಬಿಡುಗಡೆ ಮಾಡಿಸಿದ ದರ್ಶನ್:ಗರಡಿ ಚಿತ್ರದ ಟ್ರೈಲರ್ ಅನ್ನು ನಟ ದರ್ಶನ್ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಆಂಕರ್ ಅನುಶ್ರೀ ನಿರೂಪಣೆ ಮಾಡಿದಾಗ ನಟ ದರ್ಶನ್ "ನಮ್ಮ ಸಿನಿಮಾದ ಟ್ರೈಲರ್ ನಾವೇ ಬಿಡುಗಡೆ ಮಾಡಿದರೆ ಹೇಗೆ, ಸೌಮ್ಯ ವೇದಿಕೆ ಮೇಲೆ ಬಾರಮ್ಮ" ಎಂದು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸೌಮ್ಯರನ್ನು ನಟ ದರ್ಶನ್ ವೇದಿಕೆಗೆ ಆಹ್ವಾನಿಸಿದರು. ವೇದಿಕೆಗೆ ಸೌಮ್ಯರನ್ನು ಕೈ ಹಿಡಿದು ಆಹ್ವಾನಿಸಿದ ನಟ ದರ್ಶನ್ "ಪ್ಲೇ ಮಾಡು ಚಿನ್ನ" ಎಂದು ಟ್ರೈಲರ್ ಲಾಂಚ್ ಮಾಡಿಸಿದರು.ಮಾಜಿ ಸಚಿವ ಬಿಸಿ ಪಾಟೀಲ್ ಮಾತನಾಡಿ, ಸಂಗೊಳ್ಳಿ ರಾಯಣ್ಣನ ಬಗ್ಗೆ ನಿಮಗೆಲ್ಲರಿಗೂ ಪ್ರೀತಿಯಿದೆ. ಅಂತಹ ಸಂಗೊಳ್ಳಿ ರಾಯಣ್ಣ, ಯುಜಮಾನ ನಮ್ಮ ಚಿತ್ರದ ಬೆನ್ನೆಲುಬು. ತಮ್ಮ ಸಾವಿರಾರು ಅಭಿಮಾನಿಗಳನ್ನು ಭೇಟಿ ಮಾಡುವ ಸಲುವಾಗಿ ನಿನ್ನೆ ರಾತ್ರಿ ಗುಜರಾತ್ನಲ್ಲಿ ಶೂಟಿಂಗ್ ಮುಗಿಸಿಕೊಂಡು ಇಲ್ಲಿಗೆ ಬಂದಿದ್ದಾರೆ. ಇದೇ ರೀತಿ ನಮ್ಮ ಪಕ್ಕದ ಊರಿನ ಯೋಗರಾಜ್ ಭಟ್ಟರು, ಇವರಿಬ್ಬರು ಸೇರಿ ಉತ್ತರ ಕರ್ನಾಟಕದ ಮಣ್ಣಿನ ಸೊಗಸನ್ನು ಇಟ್ಟುಕೊಂಡು ಚಿತ್ರ ಮಾಡಿದ್ದಾರೆ. ಮೊದಲಿನ ಗರಡಿ ಈಗ ಜಿಮ್ ಆಗಿ ಪರಿವರ್ತನೆಯಾಗಿದೆ. ಮತ್ತೆ ಜಿಮ್ ಗರಡಿಯಾಗಿ ಪರಿವರ್ತನೆಯಾಗಲಿದೆ. ಒಂದು ಉತ್ತಮವಾದ ಚಿತ್ರ ಈ ಗರಡಿ" ಎಂದು ಅಭಿಪ್ರಾಯಪಟ್ಟರು.
ಹೇಗಿದೆ ಗರಡಿ ಚಿತ್ರದ ಟ್ರೈಲರ್: ಗರಡಿ ಚಿತ್ರದ ಮೂಲಕ ಜನರಿಗೆ ಭರ್ಜರಿ ಮನರಂಜನೆ, ಸಾಹಸ, ಕನ್ನಡ ನಾಡಿನ ನೆಲದ ಸೊಗಡು, ಕೌತುಕದ ಕಥೆಯೊಂದನ್ನು ಉಣಬಡಿಸುವ ಎಲ್ಲಾ ಸೂಚನೆಗಳನ್ನು ಗರಡಿ ಚಿತ್ರದ ಟ್ರೈಲರ್ನಲ್ಲಿ ಕಾಣಬಹುದು. "ಮೈಯಲ್ಲಿ ಶಕ್ತಿ ಇದೆ ಎಂದು ಕ್ರಿಮಿನಲ್ ಕೆಲಸ ಮಾಡಬಾರದು ಪೈಲ್ವಾನ್ಗಳು. ಗರಡಿ ಮನೆ ಮರ್ಯಾದೆ ತೆಗಿಬಾರದು" ಎಂಬ ಮಾತಿನಿಂದಲೇ ಆರಂಭವಾಗುವ ಟ್ರೈಲರ್ ಈ ಚಿತ್ರದಲ್ಲಿ ಅಪರಾಧವೊಂದು ಘಟಿಸುವ ಸೂಚನೆ ನೀಡಲಾಗಿದೆ. "ಒಂದು ಕಾಲದಲ್ಲಿ ಗರಡಿ ಮನೆಯನ್ನು ಪೊಲೀಸ್ ಸ್ಟೇಷನ್ ಅನ್ನುತ್ತಿದ್ದರು. ಗರಡಿ ಊರು ಕಾಯುತ್ತಿತ್ತು. ಬಳಿಕ ಟ್ರೈಲರ್ ಗರಡಿ ಮನೆಯೊಳಗಿನ ಕುಸ್ತಿ, ಪ್ರೀತಿಕಥೆ, ಅಪರಾಧದ ಕುರಿತ ಹುಡುಕಾಟ ಇತ್ಯಾದಿಗಳತ್ತ ತೆರೆದುಕೊಳ್ಳುತ್ತದೆ. ಹಿನ್ನೆಲೆ ಸಂಗೀತ, ಸಿನಿಮಾಟೊಗ್ರಫಿಯೂ ಸೂಪರ್ ಆಗಿರಬಹುದಾದ ಸೂಚನೆಯನ್ನು ಟ್ರೈಲರ್ ನೀಡಿದೆ.ಗರಡಿ ಚಿತ್ರದ ಟ್ರೈಲರ್ ವೀಕ್ಷಿಸಿ: ನಟ ಸೂರ್ಯ ಅವರು ಗರಡಿ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕ ನಟನಾಗಿ ಪ್ರವೇಶ ಮಾಡಿದ್ದಾರೆ. ನಟ ದರ್ಶನ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಗರಡಿ ಚಿತ್ರದ ಟ್ರೈಲರ್ನಲ್ಲೂ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. ಕನ್ನಡ ಗರಡಿ ಸಿನಿಮಾ ನವೆಂಬರ್ 10ರಂದು ಬಿಡುಗಡೆಯಾಗಲಿದೆ. ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿದ ಗರಡಿ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸುರೇಶ್ ಸಂಕಲನ, ನಿರಂಜನ್ ಬಾಬು ಛಾಯಾಗ್ರಹಣ ಇರುವ ಈ ಚಿತ್ರದ ವಿತರಣಾ ಹಕ್ಕನ್ನು ರಿಲಯೆನ್ಸ್ ಎಂಟರ್ಟೇನ್ಮೆಂಟ್ ಪಡೆದಿದೆ. ಸೃಷ್ಟಿ ಪಾಟೀಲ್ ಅವರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಸೂರ್ಯ ನಾಯಕನಟನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಸೋನಾಲ್ ಮೊಂತೆರೊ, ಬಿ.ಸಿ.ಪಾಟೀಲ್, ರವಿಶಂಕರ್, ಧರ್ಮಣ್ಣ, ಸುಜಯ್ ಬೇಲೂರು, ರಾಘವೇಂದ್ರ, ಚೆಲುವರಾಜ್, ತೇಜಸ್ವಿನಿ ಪ್ರಕಾಶ್, ನಯನ ಸೇರಿದಂತೆ ಹಲವು ಕಲಾವಿದದರು ಈ ಚಿತ್ರದಲ್ಲಿದ್ದಾರೆ.