ಮನೆಗಳಿಗೆ ಹಾನಿ: ಅನುದಾನ ಮಂಜೂರಿಗೆ ಒತ್ತಾಯಿಸಿ ಆಹೋರಾತ್ರಿ ಧರಣಿ ಸತ್ಯಾಗ್ರಹ
ಲೋಕದರ್ಶನ ವರದಿ
ಬೈಲಹೊಂಗಲ 12: 2019-20 ನೇ ಸಾಲಿನ ಬುಡರಕಟ್ಟಿ ಗ್ರಾಪಂ ವ್ಯಾಪ್ತಿಯ ಬುಡರಕಟ್ಟಿ, ಬಿದರಗಡ್ಡಿ ಗ್ರಾಮಗಳಲ್ಲಿ ವರುಣನ ಅರ್ಭಟಕ್ಕೆ 351 ಮನೆಗಳಿಗೆ ಹಾನಿಯಾಗಿದ್ದು ಅರ್ಹ ಫಲಾನುಭವಿಗಳ ಹೆಸರು ದಾಖಲಿಸಿಕೊಂಡು ಕೂಡಲೇ ಅವರಿಗೆ ಅನುದಾನ ಮಂಜೂರ ಮಾಡಬೇಕೆಂದು ಒತ್ತಾಯಿಸಿ, ಬುಡರಕಟ್ಟಿ ಗ್ರಾಮದ ಗೆಳೆಯರ ಬಳಗ, ಕರವೇ ಕಾರ್ಯಕರ್ತರ ನೇತೃತ್ವದಲ್ಲಿ ಹಲವಾರು ಗ್ರಾಮಸ್ಥರು ಗುರುವಾರ ತಹಶೀಲ್ದಾರ ಕಾರ್ಯಾಲಯದ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿ, ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಯುವ ಮುಖಂಡ ಸಿದ್ಧಾರೂಡ ಹೊಂಡಪ್ಪನವರ, ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ಮಾತನಾಡಿ, 2019-20ನೇ ಸಾಲಿನ ಬುಡರಕಟ್ಟಿ ಗ್ರಾಪಂ ವ್ಯಾಪ್ತಿಯ ಬುಡರಕಟ್ಟಿ, ಬಿದರಗಡ್ಡಿ ಗ್ರಾಮಗಳಲ್ಲಿ ವರುಣ ಅರ್ಭಟಕ್ಕೆ 351 ಮನೆಗಳಿಗೆ ಹಾನಿಯಾಗಿದ್ದು, ಕೆಲ ಕುಟುಂಬಸ್ಥರಿಗೆ ವಾಸಿಸಲಿಕ್ಕೆ ಸೂರು ಇಲ್ಲದೇ ಗುಡಿ, ಗುಂಡಾರ, ಜೊಪಡ ಪಟ್ಟಿ, ಉಗ್ರಾಣಗಳಲ್ಲಿ ವಾಸ ಮಾಡುವ ಪರಿಸ್ಥಿತಿ ಇದ್ದು, ಗ್ರಾಪಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಅರ್ಹ ಫಲಾನುಭವಿಗಳು ಪರಿಹಾರದಿಂದ ವಂಚಿತರಾಗಿದ್ದಾರೆ.
ಗ್ರಾಪಂ ಅಧಿಕಾರಿಗಳು, ಸದಸ್ಯರುಗಳು ತಮಗೆ ಬೇಕಾದವರಿಂದ ಹಣ ಪಡೆದು ಮಂಜೂರ ಮಾಡಿದ್ದಾರೆ ಎಂದು ಗಂಭೀರವಾಗಿ ಅಪಾದಿಸಿದ್ದಾರೆ. ಈ ಕುರಿತು ಕಳೆದ ಸೆಪ್ಟೆಂಬರದಲ್ಲಿ ಗ್ರಾಪಂ ಕಾರ್ಯಾಲಯದ ಮುಂದೆ ಅರ್ಹ ಫಲಾನುಭವಿಗಳು ಸತ್ಯಾಗ್ರಹ ಹಮ್ಮಿಕೊಂಡು ಉಗ್ರವಾಗಿ ಪ್ರತಿಭಟನೆ ಮಾಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಲ್ಪಿಸುವದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದು, ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ತಹಶೀಲ್ದಾರ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು ಎಂದು ಅಕ್ರೋಶ ವ್ಯಕ್ತ ಪಡಿಸಿ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾ ನಿರತ ಸ್ಥಳಕ್ಕೆ ತಹಶೀಲ್ದಾರ ಬಸವರಾಜ ನಾಗರಾಳ, ಸಿಪಿಐ ಉಳವಪ್ಪ ಸಾತೇನಹಳ್ಳಿ ಭೇಟಿ ನೀಡಿ ಪ್ರತಿಭಟನಾ ನಿರತ ಅರ್ಹಫಲಾನುಭವಿಗಳ ಸಮಸ್ಯೆಯನ್ನು ಆಲಿಸಿ, ತಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿ ಹೇಳಿದಾಗ, ನಾವು ಈ ಹಿಂದೆ ಗ್ರಾಪಂ ಮುಂದೆ ಪ್ರತಿಭಟನೆ ಮಾಡುವಾಗ ತಾವು ಇದೇ ಮಾತನ್ನು ಹೇಳಿದ್ದೀರಿ, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರುವವರಗೆ ನಾವು ಹಿಂದೆ ಸರಿಯುದಿಲ್ಲ ಎಂದು ಪಟ್ಟು ಹಿಡಿದರು.
ಪತ್ರಕರ್ತರು ತಹಶೀಲ್ದಾರ ಬಸವರಾಜ ನಾಗರಾಳ ಅವರನ್ನು ವಿಚಾರಿಸಿದಾಗ ಸನ್ 2019ರ ಸಾಲಿನಲ್ಲಿ ತಾಲೂಕಿನದ್ಯಾಂತ ಸುಮಾರು 533 ಮನೆಗಳು ನೊಂದಣಿ ಆಗದೇ ಹಾಗೇ ಉಳಿದುಕೊಂಡಿವೆ. ಅದರಲ್ಲಿ ಬುಡರಕಟ್ಟಿ ಗ್ರಾಪಂ ವ್ಯಾಪ್ತಿಯ 86 ಮನೆಗಳು ಉಳಿದಿವೆ. ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಹಿಂದೆ ಈ ಕುರಿತು ಪ್ರತಿಭಟನೆ ಸಹ ನಡೆದಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಇನ್ನೂ ವರೆಗೆ ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ, ಮಾಹಿತಿ ಬರುವ ವರೆಗೆ ನಮಗೆ ಎಂಟ್ರಿ ಮಾಡಲು ಅವಕಾಶವಿಲ್ಲ, ಇದು ರಾಜ್ಯಾದ್ಯಾಂತ ಸಮಸ್ಯೆ ಇದೆ, ಹಣ ನೀಡಿದ ವ್ಯಕ್ತಿಗಳಿಗೆ ಮಾತ್ರ ಮನೆ ಮಂಜೂರ ಮಾಡಲಾಗಿದೆ ಎಂದು ಅರ್ಹ ಫಲಾನುಭವಿಗಳು ಗಂಭೀರವಾಗಿ ಅಪಾದಿಸುತ್ತಿದ್ದಾರೆ ಇದರ ಕುರಿತು ಒಂದು ಸಮಿತಿ ರಚಿಸಿ ತನಿಖೆ ಕೈಗೊಳ್ಳಲಾಗುವುದು ಎಂದರು.
ಮಧ್ಯಾಹ್ನ ಊಟ: ಪ್ರತಿಭಟನಾಕಾರರು ಮಧ್ಯಾಹ್ನ ತಹಶೀಲ್ದಾರ ಕಾರ್ಯಾಲಯದ ಮುಂದೆ ಊಟ ಸವಿದರು.
ಮಲ್ಲಯ್ಯ ಪೂಜೇರ, ಶಶಿಕುಮಾರ ಪಾಟೀಲ, ಬಸಯ್ಯ ಕಡಯ್ಯನವರ, ಮಂಜುನಾಥ ಇಂಗಳಗಿ, ಕಮಲವ್ವ ಹುಗ್ಗಿ, ಅನ್ನಪೂರ್ಣ ನಿಕ್ಕಮ್ಮನವರ, ಈರ್ಪ ಕಲ್ಯಾಣದ, ಪಾರ್ವತೆವ್ವ ಮಠಪತಿ, ಭೀಮವ್ವ ಬಂಡಿವಡ್ಡರ, ಪಾರವ್ವ ಮಂಗಳಗಟ್ಟಿ, ಮಲ್ಲಿಕಾರ್ಜುನ ಬಾಜಿ ಮುಂತಾದವರು ಇದ್ದರು.