ದಫೇದಾರ ಸಿದ್ಧಲಿಂಗ ಆಜೂರ ಕಾರ್ಯ ಅನುಕರಣೀಯ: ದಡ್ಡಿ
ಅಥಣಿ 30: ಅಥಣಿ ಪುರಸಭೆಯಲ್ಲಿ ದಫೇದಾರರಾಗಿ 39 ವರ್ಷಗಳವರೆಗೆ ಕಾರ್ಯನಿರ್ವಹಿಸಿ ಜುಲೈ 31ರಂದು ಸಿದ್ಧಲಿಂಗ ಆಜೂರ ನಿವೃತ್ತಿಯಾಗುತ್ತಿದ್ದು ಅವರ ಕಾರ್ಯ ಅನುಕರಣೀಯ ಎಂದು ಅಥಣಿ ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.
ಅವರು ಅಥಣಿ ಪುರಸಭೆಯಲ್ಲಿ ದಫೇದಾರ ಸಿದ್ಧಲಿಂಗ ಆಜೂರ ಹಾಗೂ ವಾಲಮನ್ ಮುದಕಪ್ಪ ಅಂಬಿ ಇವರ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪುರಸಭೆಯಲ್ಲಿ ದಫೇದಾರರಾಗಿ ಇಷ್ಟು ಸುದೀರ್ಘವಾಗಿ ಕಾರ್ಯನಿರ್ವಹಿಸುವುದು ಅಷ್ಟು ಸುಲಭದ ಮಾತಲ್ಲ ಆದರೆ ಆಜೂರ ಇವರು ಪಟ್ಟಣ ವ್ಯಾಪ್ತಿಯಲ್ಲಿ ಅನೇಕ ಅತಿಕ್ರಮಣ ತಡೆದಿದ್ದಾರೆ ಜೊತೆಗೆ ಪಟ್ಟಣದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯತೆ ಕಾಪಾಡುವಲ್ಲಿಯೂ ಸಹ ವಿಶೇಷ ಆಸಕ್ತಿ ವಹಿಸಿದ್ದು, ಇಂದಿನ ಪೌರಕಾರ್ಮಿಕರು ಸಿದ್ಧಲಿಂಗ ಆಜೂರ ಇವರ ಕಾರ್ಯವನ್ನು ಅನುಕರಿಸಬೇಕು ಎಂದು ಹೇಳಿದರು.
15 ವರ್ಷಗಳಿಂದ ವಾಲಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮುದಕಪ್ಪ ಅಂಬಿ ಮಹಾಪೂರದಂತಹ ಸಂಕಷ್ಟದ ಸಮಯದಲ್ಲಿ ಅಥಣಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶಕ್ಕಾಗಿ ಕೃಷ್ಣಾ ನದಿ ದಡದಲ್ಲಿರುವ ಜಾಕವೆಲ್ಲನಲ್ಲಿ ವಾಸ್ತವ್ಯ ಹೂಡುತ್ತಿದ್ದರು ಎಂದು ಹೇಳಿದರು.
ಹಿರಿಯ ಧುರೀಣ ಅರವಿಂದರಾವ ದೇಶಪಾಂಡೆ ಮಾತನಾಡಿ 39 ವರ್ಷಗಳ ಕಾಲ ಒಂದೇ ಪುರಸಭೆಯಲ್ಲಿ ಕಾರ್ಯನಿರ್ವಹಿಸಿದ್ದು ವಿಶೇಷ ಎಂದರು.
ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಮಾತನಾಡಿ, ಅನಾದಿ ಕಾಲದಿಂದಲೂ ದಲಿತರೇ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಕೂಡ ಪೌರಕಾರ್ಮಿಕರಿಗೆ ಸಿಗಬೇಕಾದ ಸರಕಾರದ ಸೌಲಭ್ಯಗಳು ದೊರಕುತ್ತಿಲ್ಲ ಎಂದ ಅವರು ಸಿದ್ಧಲಿಂಗ ಆಜೂರ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದು, ಅವರ ಕೆಲಸ ಆಸಕ್ತಿ ತೋರಿಸುತ್ತದೆ ಎಂದರು.
ಪುರಸಭಾ ಸದಸ್ಯರಾದ ದತ್ತಾ ವಾಸ್ಟರ್, ಆನಂದ ಟೊಣಪಿ, ಪತ್ರಕರ್ತ ವಿಜಯಕುಮಾರ ಅಡಹಳ್ಳಿ ಮಾತನಾಡಿದರು.
ಪೌರಕಾರ್ಮಿಕ ಸಂಘದ ಅಧ್ಯಕ್ಷ ಚನ್ನಪ್ಪ ಜಿರಗ್ಯಾಳ, ಪುರಸಭಾ ಸದಸ್ಯರಾದ ಮಲ್ಲೇಶ ಹುದ್ದಾರ, ಪ್ರಮೋದ ಬಿಳ್ಳೂರ, ಆಸೀಫ್ ತಾಂಬೋಳಿ, ಉದಯ ಸೋಳಸಿ, ವಿಶ್ವನಾಥ ಗಡದೆ, ಬಸವರಾಜ ಹಳ್ಳದಮಳ, ವೀಲೀನ ಯಳಮಲ್ಲೆ, ಸೈಯ್ಯದಮೀನ್ ಗದ್ಯಾಳ, ಬೀರ್ಪ ಯಕ್ಕಂಚಿ, ಮಲ್ಲಿಕಾರ್ಜುನ ಬುಟಾಳಿ, ವಸೀಮ ಖೆಮಲಾಪುರ ಸೇರಿದಂತೆ ಪುರಸಭಾ ಸಿಬ್ಬಂದಿ ವರ್ಗ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.