ತೈಲಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ನಿಂದ ಸೈಕಲ್ ಜಾಥಾ
ಅಥಣಿ 14: ತೈಲ ಬೆಲೆಯೊಂದಿಗೆ ದಿನಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರಿದ್ದು ಬಡಜನರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಹೇಳಿದರು. ಅವರು ಅಥಣಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆಲೆ ಏರಿಕೆ ವಿರುದ್ಧ ಹಮ್ಮಿಕೊಂಡ ಸೈಕಲ್ ಜಾಥಾದಲ್ಲಿ ಮಾತನಾಡುತ್ತಿದ್ದರು.
ವಿಶ್ವದ ಬೇರೆ ಚಿಕ್ಕ ಚಿಕ್ಕ ರಾಷ್ಟ್ರಗಳಲ್ಲಿಯೂ ಸಹ ತೈಲಬೆಲೆ 50 ರೂಗಳ ಆಸುಪಾಸಿನಲ್ಲಿದ್ದು, ನಾವುಮುಂದುವರಿದ ರಾಷ್ಟ್ರವೆಂದು ಹೇಳಿಕೊಳ್ಳುತ್ತಿರುವ ನಮ್ಮಲ್ಲಿ ನೂರು ರೂ.ಗಳ ಗಡಿದಾಡಿ ಇನ್ನೂ ತೈಲಬೆಲೆ ಮುಂದುವರಿಯುತ್ತಲೇ ಇದೆ. ಈ ಹಿಂದೆ ಕಾಂಗ್ರೆಸ್ ಸರಕಾರ ಕೇವಲ 70 ಪೈಸೆಗಳಷ್ಟು ಬೆಲೆ ಏರಿಕೆ ಮಾಡಿದಾಗ ಇಂದಿನ ಕೇಂದ್ರ ಸಚಿವರಾದ ಸ್ಮೃತಿ ಇರಾನಿ ಹಾಗೂ ಬಿಜೆಪಿ ಮುಖಂಡ ಪ್ರಕಾಶ ಜಾವಡೆಕರ ಅವರು ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡಿದ್ದರಲ್ಲದೆ ಕಾಂಗ್ರೆಸ್ ಸರಕಾರವನ್ನು ಹೀಯಾಳಿಸಿ ಮಾತನಾಡಿದ್ದರು, ಈಗ ಅವರದ್ದೇ ಆದ ಬಿಜೆಪಿ ಸರಕಾರ ಇರುವಾಗ ನೂರು ರೂಪಾಯಿಗಳಷ್ಟು ತೈಲ ಬೆಲೆ ಹೆಚ್ಚಾಗಿದ್ದರೂ ಕೂಡ ಏನೂ ಅರಿಯದವರಂತೆ ಇರುವುದು ಅವರ ದುರುದ್ದೇಶ ಪ್ರದರ್ಶಿಸುತ್ತದೆ ಎಂದ ಅವರು ಕಾಂಗ್ರೆಸ್ ಪಕ್ಷ ಜನಪರವಾದ ಪಕ್ಷ ಜನರ ನೋವುಗಳಿಗೆ ನಾವು ಸ್ಪಂದಿಸುತ್ತೇವೆ, ಜನತೆಯ ಜೊತೆಗೆ ನಾವಿದ್ದೇವೆ ಎನ್ನುವ ಉದ್ದೇಶದಿಂದ ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ಈ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳಿ ಮಾತನಾಡಿ ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಏಳುವರ್ಷಗಳಲ್ಲಿ ಕೇವಲ ಬೆಲೆ ಏರಿಕೆಯೇ ಸಾಧನೆಯಾಗಿದೆ, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ಕೊಡದೆ ಕೇವಲ ಜನಸಾಮಾನ್ಯರ ಜೀವ ಹಿಂಡುವ ಕಾರ್ಯ ಮಾಡುತ್ತಿದ್ದಾರೆ ಎಂದ ಅವರು ಜನರೊಂದಿಗೆ ಕಾಂಗ್ರಸ್ ಪಕ್ಷವಿದೆ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದೆ ಆದ್ದರಿಂದಲೇ ಇಂದು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದ್ದು ಜನರ ಧ್ವನಿ ಸರಕಾರದವರೆಗೂ ಈ ಮೂಲಕ ತಲುಪಿಸಲಾಗುವುದು ಎಂದರು.
ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಬಸವರಾಜ ಬುಟಾಳಿ, ಧರೆಪ್ಪ ಠಕ್ಕಣ್ಣವರ, ರಮೇಶ ಸಿಂದಗಿ, ಅಸ್ಲಂ ನಾಲಬಂದ, ಸತ್ಯಪ್ಪ ಬಾಗೆನ್ನವರ, ಶಿವು ಗುಡ್ಡಾಪುರ, ಸುರೇಶಗೌಡ ಪಾಟೀಲ, ಬಾಬು ಖೇಮಲಾಪುರ, ಮಂಜು ಹೋಳಿಕಟ್ಟಿ, ಗುಲಾಬ ನಾಲಬಂದ, ಮಯೂರ ಶಿಂಗೆ. ವಿಲಿನರಾಜ ಯಳಮಲ್ಲೆ, ಸಚೀನ ಬುಟಾಳಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.