ಗೋಕಾಕ್

ಮಹಿಳೆಯರಿಂದ ಸಂಸ್ಕಾರ-ಸಂಸ್ಕೃತಿ ಉಳಿಯಲು ಸಾಧ್ಯ : ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿಕೆ: ಕುಂದರನಾಡೋತ್ಸವದಲ್ಲಿ ಮಹಿಳಾ ಸಮಾವೇಶ ಉಡಿ ತುಂಬುವ ಕಾರ್ಯಕ್ರಮ

ಮಹಿಳೆಯರಿಂದ ಸಂಸ್ಕಾರ-ಸಂಸ್ಕೃತಿ ಉಳಿಯಲು ಸಾಧ್ಯ : ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿಕೆ: ಕುಂದರನಾಡೋತ್ಸವದಲ್ಲಿ ಮಹಿಳಾ ಸಮಾವೇಶ ಉಡಿ ತುಂಬುವ ಕಾರ್ಯಕ್ರಮ

ಲೋಕದರ್ಶನ ವರದಿ 


ಗೋಕಾಕ 24: ಮಕ್ಕಳನ್ನು ಬಾಲ್ಯದಿಂದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಘಟಪ್ರಭ ಕೆಂಪಯ್ಯಸ್ವಾಮಿ ಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು. 

ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಕುಂದರನಾಡೋತ್ಸವ-2022ದಲ್ಲಿ ಬುಧುವಾರ ಸಂಜೆ ನಡೆದ ಮಹಿಳಾ ಸಮಾವೇಶ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಅಕ್ಕಮಹಾದೇವಿಯವರು ಬಸವಣ್ಣನ ಕಾಲದಲ್ಲಿ ಮಹಿಳಾ ಕ್ರಾಂತಿ ಮಾಡಿದ್ದರು. ಸಮಾಜದಲ್ಲಿ ಪ್ರತಿಯೊಂದು ಮನೆಗಳು ಉದ್ಧಾರವಾಗಬೇಕೆಂದರೆ ಮಹಿಳೆಯ ಪಾತ್ರ ಪ್ರಮುಖವಾದದ್ದು. ಕಿತ್ತೂರು ರಾಣಿ ಚೆನ್ನಮ್ಮ, ಒಣಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಂತಹ ಮಹನೀಯರನ್ನು ಕಂಡಿದ್ದು ನಮ್ಮ ದೇಶ. ಮಹಿಳೆಯರಿಗೆ ಅಂಥವರು ಆದರ್ಶವಾಗಬೇಕು. ನಾಡಿನಲ್ಲಿ ಅಕ್ಕನ ಬಳಗವನ್ನು ಸಂಸ್ಥಾಪಿಸಿ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದವರು ಹಾನಗಲ್ ಶ್ರೀಗಳು. ಪ್ರತಿಯೊಬ್ಬ ಮಹಿಳೆಯು ಶಿಕ್ಷಣ ಪಡೆದು ಉನ್ನತ ಹಂತಕ್ಕೆ ತಲುಪಬೇಕು ಎಂದು ಆಶೀರ್ವದಿಸಿದರು. 

ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಮಹಾಸ್ವಾಮಿಗಳು ಮಾತನಾಡಿ ಪ್ರತಿಯೊಂದು ವಿಷಯದಲ್ಲಿ ತಾಯಿಯನ್ನು ಕಾಣುವ ದೇಶ ಭಾರತ. ಮಹಿಳೆಯರಿಗೆ ಇರುವ ಕರುಣೆ ಬೇರೆ ಯಾವುದೇ ವಸ್ತುವಿನಲ್ಲಿ ಕಾಣಲು ಅಸಾಧ್ಯ. ಅಮರಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀಮಠವನ್ನು ನಾಡಿನ ಶ್ರೇಷ್ಟ ಮಠಗಳನ್ನಾಗಿಸುವಲ್ಲಿ ಶ್ರಮಿಸುತ್ತಿದ್ದು ಅವರಿಗೆ ಪ್ರತಿಯೊಬ್ಬರು ಬೆನ್ನಲುಬಾಗಿ ನಿಲ್ಲಬೇಕು ಎಂದರು. 

ಮಹಿಳಾ ಸಮಾವೇಶ ಅಂಗವಾಗಿ ಶ್ರೀಮಠದ ಭಕ್ತರಾದ ನೂತನ ಪಿಎಸ್‌ಐ ಗೀತಾ ರೆಡ್ಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಶ್ರೀಮಠದಿಂದ ಮುತ್ತೈದೆಯರಿಗೆ ಉಡಿ ತುಂಬಲಾಯಿತು. 

ಮೂಲಗದ್ದೆಯ ಚನ್ನಬಸವ ಸ್ವಾಮಿಗಳು, ವಿಶ್ವನಾಥ ದೇವರು, ಚನ್ನಬಸವ ದೇವರು ಅರಳಿಕಟ್ಟಿ, ಅನ್ನದಾನಿ ದೇವರು ಘಟಪ್ರಭ, ಯುವ ಧುರೀಣರಾದ ಪ್ರಕಾಶಗೌಡ್ರು ಪೋಲಿಸ್‌ಗೌಡ್ರು, ಬೆಳಗಾವಿ ಸಮಾಜ ಸೇವಕರಾದ ಮಹಾಂತೇಶ ವಕ್ಕುಂದ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ