ಹೊಸಪೇಟೆ

ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ- ಡಾ.ಡಿ.ವಿ.ಪರಮಶಿವಮೂರ್ತಿ

ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ- ಡಾ.ಡಿ.ವಿ.ಪರಮಶಿವಮೂರ್ತಿ

ಹಂಪಿ 01: ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಶ್ರೀ ಶಂಕರ್ ಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಪೇಟೆ, ವಿಜಯನಗರ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ  ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನ ಎನ್ನುವ ವಿಶಿಷ್ಟ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, “ಇಂದಿನ ಮೊಬೈಲ್‌ಗಳ ಕಾಲದಲ್ಲಿ ದುಬಾರಿಯಾದ ಮೊಬೈಲ್‌ಗಳನ್ನು ಹಿಡಿದು ಕಾಲಹರಣ ಮಾಡುವ ಬದಲು ಕಡಿಮೆ ಬೆಲೆಯ ಆದರೆ ಆಳವಾದ ಜ್ಞಾನವನ್ನು ನೀಡುವ ಪುಸ್ತಕಗಳನ್ನು ಓದುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕೆಂದು” ಹೇಳಿದರು. ಮುಂದುವರಿದು ಅವರು “ಮದುವೆ, ಗೃಹ ಪ್ರವೇಶ ಮೊದಲಾದ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿಯೂ, ಪಾತ್ರೆ ಮೊದಲಾದ ಉಡುಗೊರೆಗಳನ್ನು ಕೊಡುವ ಬದಲು ಶಾಶ್ವತವಾಗಿ ಜ್ಞಾನದ ರೂಪದಲ್ಲಿ ಮನೆಯಲ್ಲಿರಬಹುದಾದ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡುವಂತೆ” ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.  

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ  ಸುಚಿತ್ರಾ, ವೈ. ಹೇಮಲತಾ, ಎಂ. ಕಾವ್ಯ, ಜ್ಯೋತಿ ಟಿ, ಜಾಹ್ನವಿ, ತೇಜಸ್ವಿನಿ, ಉಮಾ, ಅಶ್ವಿನಿ, ಲಕ್ಷ್ಮೀ, ವೀರಭದ್ರಮ್ಮ, ಅರುಣಾ, ಜಯಲಲಿತಾ, ಶ್ವೇತಾ, ಅನಿಲ್ ಹೆಚ್, ಪೃಥ್ವೀಕುಮಾರ್ ಹೆಚ್, ಎ.ಹೆಚ್‌. ಮೋನಿಕಾ ಅವರು ಕ್ರಮವಾಗಿ, ಪ್ರಸಾರಾಂಗದ ಮಂಟಪ ಮಾಲೆಯ ಪುಸ್ತಕಗಳಾದ ಆಧುನಿಕ ಕನ್ನಡ ಸಣ್ಣಕಥೆಗಳು, ಕನ್ನಡ ಸಾಹಿತ್ಯ ವಿಮರ್ಶೆ, ಹಸ್ತಪ್ರತಿ ಲಿಪಿಕಾರರು, ಕನ್ನಡ ಭಾಷಾ ಪ್ರಭೇದಗಳು, ಪೆಣ್ಬುಯ್ಯಲ್, ಬಯಕಾರ ರಾಮಪ್ಪ, ಮಠದ ಪರಂಪರೆ, ಪೆಣ್ಬುಯ್ಯಲ್, ಅಲಕ್ಷಿತ ವಚನಕಾರರ ಲೋಕದೃಷ್ಟಿ, ಬೇಂದ್ರೆಯವರ ಕವನಗಳಲ್ಲಿ ಸ್ತ್ರೀ, ನಮ್ಮ ನಡುವಿನ ತೇಜಸ್ವಿ, ಕನ್ನಡದಲ್ಲಿ ಮಕ್ಕಳ ಸಾಹಿತ್ಯ, ವಿವಾಹ ಮತ್ತು ಕುಟುಂಬ, ಮಾತಂಗಿ, ನಗರೀಕರಣ ಮತ್ತು ಮಹಿಳೆ ಮತ್ತು ಆಧುನಿಕತೆಯ ಸವಾಲು ಮೊದಲಾದ ಪುಸ್ತಕಗಳ ಕುರಿತು ಮಾತಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಕೆ. ಶಿವಪ್ಪ ಅವರು ವಹಿಸಿದ್ದರು. ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಉಪಸ್ಥಿತರಿದ್ದರು. ನಿರ್ದೇಶಕರಾದ ಡಾ.ಮಾಧವ ಪೆರಾಜೆಯವರು ಪ್ರಾಸ್ತಾವಿಕ ನುಡಿಗಳ ಮೂಲಕ ಮನೆ ಮನೆಗೆ ಕನ್ನಡ ಪುಸ್ತಕ ಅಭಿಯಾನದ ಉದ್ದೇಶಗಳನ್ನು ವಿವರಿಸಿದರು. ಕನ್ನಡ ವಿಭಾಗದ ಅಧ್ಯಾಪಕರೂ ಈ ಕಾರ್ಯಕ್ರಮದ ಸಂಯೋಜಕರೂ ಆದ ಡಾ. ನಾಗಣ್ಣ ಕಿಲಾರಿ ಹಾಗೂ ಪ್ರಸಾದ್ ಅವರು ಉಪಸ್ಥಿತರಿದ್ದರು. ಅಧ್ಯಾಪಕರಾದ ಅಮೃತ ನಾಯಕ್ ನಿರೂಪಣೆ ಮಾಡಿದರು. ಡಾ. ಗಿರಿಜಾ ಬೋದುರ ವಂದಿಸಿದರು. 


ಸುದ್ದಿ ಓದಿ