ಚಿರು ಪುತ್ರನ ತೊಟ್ಟಿಲು ಶಾಸ್ತ್ರ : ಮಗನೇ ನನ್ನ ಶಕ್ತಿ ಎಂದ ಮೇಘನಾ
ಬೆಂಗಳೂರು, ನವೆಂಬರ್ 12: ಬದುಕಿನಲ್ಲಾಗಿರುವ ಬಹುದೊಡ್ಡ ನೋವನ್ನು ಮರೆಯುವುದು ಅಸಾಧ್ಯ. ಆದರೆ ಮಗುವೇ ನನ್ನ ಶಕ್ತಿಯಾಗಿದ್ದು, ತನ್ನ ನಗುವಿನಿಂದ ಹೊಸ ಸಂತೋಷ ತಂದಿದ್ದಾನೆ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಅಕಾಲಿಕವಾಗಿ ಎಲ್ಲರನ್ನೂ ಅಗಲಿದ ಚಿರು ಪುತ್ರನಿಗೆ ಗುರುವಾರ ತೊಟ್ಟಿಲು ಶಾಸ್ತ್ರ ನಡೆಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಮೇಘನಾ, “ಮಗುವನ್ನು ನೋಡಿದವರೆಲ್ಲರೂ ಚಿರು ಜೆರಾಕ್ಸ್ ಕಾಪಿ ಅಂತಾರೆ. ನನಗೂ ಹಾಗೇ ಅನ್ನಿಸುತ್ತೆ. ಅಳು ಕಡಿಮೆ, ನಗು ಜಾಸ್ತಿ. ಅವರಪ್ಪನ ಬುದ್ದಿ ಎನ್ನಿಸುತ್ತೆ. ನನ್ನ ಮಗುವೇ ನನ್ನ ಶಕ್ತಿ. ಚಿರು ಎಲ್ಲ ನನ್ನ ಕೈಯಿಂದ ಮಾಡಿಸಿದ್ದಾರೆ. ನೋವು ಮರೆಯೋದು ಅಸಾಧ್ಯ. ನನ್ನ ಮಗುನ ನೋಡಿದಾಗ ಚಿರು ಕಾಣಿಸ್ತಾರೆ. ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕೆಂಬುದನ್ನು ಚಿರುವಿನಿಂದ ಕಲಿತೆ. ಮಗ ಬಂದಿರೋದು ಡಬಲ್ ಸಂಭ್ರಮ ಎಂದು ಹೇಳಿದ್ದಾರೆ.
ಪುಟ್ಟ ಕಂದನ ಆಗಮನದ ಕಾರಣ ನೋವು ತುಂಬಿದ್ದ ಜಾಗವನ್ನು ನಲಿವು ಆವರಿಸಿದೆ. ಮನೆಯವರ ಮುಖದಲ್ಲಿ ನಗು ಮೂಡಿದೆ. ಚಿರು ಹಾಗೂ ಮೇಘನಾರ ಪ್ರೀತಿಯ ಪ್ರತಿರೂಪವಾದ ಮಗುವನ್ನು ಗುರುವಾರ ಹಿರಿಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ತೊಟ್ಟಿಲಿಗೆ ಹಾಕುವ ಶಾಸ್ತ್ರ ನಡೆಸಲಾಗಿದೆ.
ಕೊರೋನಾ ಕಾರಣದಿಂದಾಗಿ ಈ ತೊಟ್ಟಿಲ ಶಾಸ್ತ್ರದಲ್ಲಿ ಕೇವಲ ಕುಟುಂಬದವರು ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.
ಚಿರು ಹಾಗೂ ಮೇಘನಾರ ಮಗುವಿಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಮನೆಯಲ್ಲಿ ಸದ್ಯಕ್ಕೆ ಚಿಂಟು ಎಂದು ಕರೆಯಲಾಗುತ್ತಿದೆ.
ವಿಶೇಷ ತೊಟ್ಟಿಲಿನಲ್ಲಿ ಜೋ. . ಲಾಲಿ:
ತೊಟ್ಟಿಲು ಶಾಸ್ತ್ರಕ್ಕಾಗಿ ಬಗೆ ಬಗೆಯ ಬಣದಿಂದ ಕೂಡಿರುವ ಹ್ಯಾಂಡ್ ಮೇಡ್ ತೊಟ್ಟಿಲನ್ನು ಗದಗದ ಮಹಿಳಾ ಸಂಘವೊಂದು ಉಡುಗೊರೆಯಾಗಿ ನೀಡಿದೆ. ಗದಗದ ವನಿತಾ ಗುತ್ತಲ್ ಈ ತೊಟ್ಟಿಲನ್ನು ಮಾಡಿಸಿದ್ದಾರೆ. ಈ ಹ್ಯಾಂಡ್ ಮೇಡ್ ತೊಟ್ಟಿಲ ಬೆಲೆ ಸುಮಾರು 1.10 ಲಕ್ಷ. ಮಾರುತಿ ಬಡಿಗೇರ್ ಎಂಬುವವರು ತೊಟ್ಟಿಲನ್ನು ತಯಾರಿಸಲು 4-5 ತಿಂಗಳು ಸಮಯ ತೆಗೆದುಕೊಂಡಿದ್ದಾರಂತೆ. ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಮೂಲಕ ಮೇಘನಾ ರಾಜ್ ಅವರನ್ನು ಸಂಪರ್ಕಿಸಿ ತೊಟ್ಟಿಲನ್ನು ನೀಡಲಾಗಿದೆ. ಅಲ್ಲದೆ ತೊಟ್ಟಿಲು ಶಾಸ್ತ್ರಕ್ಕಾಗಿ ಉತ್ತರ ಕರ್ನಾಟಕದ ಹಲವು ಬಗೆಯ ತಿನಿಸುಗಳನ್ನು ಸ್ತ್ರೀ ಶಕ್ತಿ ವತಿಯಿಂದ ತರಿಸಲಾಗಿದೆ.