ಕಾಗವಾಡ

ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ವಿಚಾರಣೆ: ಪ್ರಯಾಣಿಕರ ಆಕ್ರೋಶ

ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ವಿಚಾರಣೆ: ಪ್ರಯಾಣಿಕರ ಆಕ್ರೋಶ
ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಕೋವಿಡ್ ಚೆಕ್‍ಪೋಸ್ಟ್ ಕೇಂದ್ರದಲ್ಲಿ ಪ್ರಯಾಣಿಕರಿಗೆ ಕೋವಿಡ್ ಬಗ್ಗೆ ಮಾಹಿತಿ ನ

ಕಾಗವಾಡ 17: ಮಹಾರಾಷ್ಟ್ರ ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರಿಂದ ಎರಡು ರಾಜ್ಯಗಳ ಗಡಿಯಾಗಿರುವ ಕಾಗವಾಡದಲ್ಲಿ ಕೋವಿಡ್ ಚೇಕ್‍ಪೋಸ್ಟ್ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ, ಸರಕಾರದಿಂದ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ನೀಡುವ ಯಾವುದೇ ವ್ಯವಸ್ಥೆಯಿಲ್ಲ. ಆದರೂ, ಇಲ್ಲಿಯ ಅಧಿಕಾರಿಗಳು ಈ ಪ್ರಮಾಣ ಪತ್ರ ಕೇಳಿಕೊಂಡು ಎಲ್ಲ ವಾಹನಧಾರಕರನ್ನು ಮರಳಿ ಕಳುಹಿಸುತ್ತಿದ್ದಾರೆ. ಇದರಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದ್ದು, ಪದೆ ಪದೇ ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯಕೀಯ ಅಧಿಕಾರಿಗಳೊಂದಿಗೆ ವಾದವಿವಾದಕ್ಕೆ ಇಳಿಯುತ್ತಿರುವ ಘಟಣೆಗಳು ಸಂಭವಿಸುತ್ತಿವೆ.

ಬುಧವಾರ ದಿ. 17ರಂದು ಕಾಗವಾಡ ಆರ್‍ಟಿಓ ಚೆಕ್‍ಪೋಸ್ಟ್ ಹತ್ತಿರ ಕೋವಿಡ್ ತಪಾಸಣೆ ಕೇಂದ್ರ ಪ್ರಾರಂಭಿಸಲಾಗಿದೆ. ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ, ಆರೋಗ್ಯ ಅಧಿಕಾರಿ ಡಾ. ಪುಷ್ಪಲತಾ ಸುನ್ನದಕಲ್ಲ, ಪಿಎಸ್‍ಐ ಹನುಮಂತ ಧರ್ಮಟ್ಟಿ ಇವರು ಮತ್ತು ಎಲ್ಲ ಸಿಬ್ಬಂದಿಗಳೊಂದಿಗೆ ಕೋವಿಡ್ ಕೇಂದ್ರದಲ್ಲಿ ಉಳಿದು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿರುವ ಎಲ್ಲ ಖಾಸಗಿ ವಾಹನಗಳು, ಸರಕಾರಿ ಬಸ್‍ಗಳು ಬೈಕ್‍ನಿಂದ ಬರುತ್ತಿರುವ ಪ್ರಯಾಣಿಕರನ್ನು ತಡೆದು ಅವರ ಬಳಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ವಿಚಾರಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಈ ಕೇಂದ್ರ ಪ್ರಾರಂಭವಾಗಿದೆ. ಕೋವಿಡ್ ಪ್ರಮಾಣ ಪತ್ರ ಸಹಜವಾಗಿ ದೊರೆಯುವುದು ಆಸಾಧ್ಯವಿದೆ. ಇದರಿಂದ ಪ್ರಯಾಣಿಕರು ನಾವೆಲ್ಲಿಂದ ಈ ಪ್ರಮಾಣ ಪತ್ರ ತರೋಣ? ಎಂದು ಕೇಳಿ ನಾವು ರೋಗಿಗಳ ಉಪಚಾರಕ್ಕಾಗಿ ಆಸ್ಪತ್ರೆಗಳಿಗೆ ಹೋಗಿ-ಬರುತ್ತಿದ್ದೇವೆ, ನಮಗೇಕೆ ತೊಂದರೆ ಕೊಡುತ್ತಿದ್ದಿರಿ? ಎಂದು ವಾದಕ್ಕೆ ಇಳಿಯುತ್ತಿದ್ದಾರೆ. ಉರಿ-ಬಿಸಿಲಿನಲ್ಲಿ ಅಧಿಕಾರಿಗಳು ಪ್ರಯಾಣಿಕರಿಗೆ ಏನು ಹೇಳುವುದು ತಿಳಿಯದಂತಾಗಿದೆ.

ವೈದ್ಯಾಧಿಕಾರಿ ಡಾ. ಪುಷ್ಪಲತಾ ಸುನ್ನದಕಲ್ಲ ತಮ್ಮ ಸಿಬ್ಬಂದಿಗಳೊಂದಿಗೆ ಪ್ರಯಾಣಿಕರ ‘ಸ್ವ್ಯಾಬ್’ ತೆಗೆದುಕೊಳ್ಳುವ ಕೇಂದ್ರ ಪ್ರಾರಂಭಿಸಿದ್ದಾರೆ. ಸಧ್ಯಕ್ಕೆ ಈ ಕೇಂದ್ರ ಪ್ರಾರಂಭಿಸಿದ್ದರಿಂದ ಪ್ರಯಾಣಿಕರು ಅನೇಕ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮಿರಜದ ಕೆಎಸ್‍ಆರ್‍ಟಿಸಿ ಕಂಟ್ರೋಲರ್ ಹೆದರಿ ಕಾಗವಾಡಕ್ಕೆ

ಕೆಎಸ್‍ಆರ್‍ಟಿಸಿ ವಿಭಾಗದ ಮಿರಜ ಕಂಟ್ರೋಲರ್ ಎಸ್.ವೈ.ಸುಗತಿ ಇವರನ್ನು ಮಿರಜ ಬಸ್ ನಿಲ್ದಾಣದಲ್ಲಿ ಕರ್ನಾಟಕದ ಪ್ರಯಾಣಿಕರು ಮುತ್ತಿಗೆ ಹಾಕಿದ್ದರಿಂದ ಹೆದರಿ ಕಾಗವಾಡಕ್ಕೆ ಬಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವಾಗ, ಬಸ್ ಚಾಲಕರು ಮತ್ತು ವಾಹಕರಿಗೆ ಕೋವಿಡ್ ಕೇಂದ್ರದಲ್ಲಿರುವ ತಹಶೀಲ್ದಾರ ಮತ್ತು ಪಿಎಸ್‍ಐ ಇವರು ಮಹಾರಾಷ್ಟ್ರದಿಂದ ಪ್ರಯಾಣಿಕರನ್ನು ತಂದರೆ ನಿಮ್ಮ ಮೇಲೆ ಎಫ್‍ಐಆರ್ ಹಾಕಿ ಸಸ್ಪೆಂಡ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಇದ್ದರಿಂದ ಸಧ್ಯಕ್ಕೆ ಇಲ್ಲಿಯ ಪ್ರಯಾಣಿಕರನ್ನು ತೆಗೆದುಕೊಂಡು ಮಹಾರಾಷ್ಟ್ರಕ್ಕೆ ಹೋದ ಬಸ್‍ಗಳು ಯಾವುದೇ ಪ್ರಯಾಣಿಕರನ್ನು ತೆಗೆದುಕೊಳ್ಳದೆ ಖಾಲಿ ಬರುತ್ತಿವೆ. ವೈದ್ಯಕೀಯ ಉಪಚಾರಕ್ಕೆ ಹೋದ ಪ್ರಯಾಣಿಕರು ಮರಳಿ ಬರಲು ಬಸ್ ಹತ್ತುತ್ತಿದ್ದಾರೆ. ಇದರಿಂದ ವಾದವಿವಾದವಾದಾಗ ನನ್ನನ್ನು ನೂರಾರು ಪ್ರಯಾಣಿಕರು ಮುತ್ತಿಗೆ ಹಾಕಿದ್ದರಿಂದ ಹೆದರಿ ಕಾಗವಾಡಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಕಾಗವಾಡ ಬಸ್ ಡಿಪೊ ಕಂಟ್ರೋಲರ್ ಚಂದ್ರಶೇಖರ ಬೇನಾಳ ಮಾಹಿತಿ ನೀಡುತ್ತ ಬೆಳಿಗ್ಗೆಯಿಂದ ನೂರಾರು ಬಸ್‍ಗಳನ್ನು ಕಾಗವಾಡ ಬಸ್ ನಿಲ್ದಾಣದಿಂದ ಮರಳಿ ಕಳುಹಿಸುತ್ತಿದ್ದೇವೆ. ದೂರಿಂದ ಬರುವ ಬಸ್‍ಗಳು ಮಹಾರಾಷ್ಟ್ರಕ್ಕೆ ಹೋಗುತ್ತಿವೆ. ಈ ಪ್ರಯಾಣಿಕರನ್ನು ಅಲ್ಲಿಗೆ ಬಿಟ್ಟು ಖಾಲಿ ಬಸ್‍ಗಳು ಮರಳಿ ಬರುತ್ತಿವೆ. ಇದರಿಂದ ಇಲಾಖೆಗೆ ತುಂಬ ಹಾನಿಯಾಗುತ್ತಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕೇಳಿದಾಗ ಸರಕಾರದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಸುದ್ದಿ ಓದಿ