ಮಹಾಮಾರಿ ಕೊರೋನಾ ಹಾವಳಿ ತಡೆಗೆ ಸಹಕರಿಸಿ: ಕವಲಾಪುರ ಕರೆ
ಶೇಡಬಾಳ 22: ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮೀಗಿಲಾಗಿದ್ದು, ಕಾರಣ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳುವಗೋಸ್ಕರ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸೆನಿಟೈಜರನಿಂದ ಕೈಗಳನ್ನು ತೊಳೆದುಕೊಂಡು ಮಹಾಮಾರಿ ಕೊರೋನಾ ಹಾವಳಿಯನ್ನು ತಡೆಯಲು ಸಹಕರಿಸುವಂತೆ ಶೇಡಬಾಳ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಂ.ಎಸ್.ಕವಲಾಪುರ ಕರೆ ನೀಡಿದರು.
ಅವರು ಗುರುವಾರ ದಿ. 22 ರಂದು ಶೇಡಬಾಳ ಪಟ್ಟಣ ಪಂಚಾಯತಿಯ ಆರೋಗ್ಯ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೊರೋನಾ ಕುರಿತು ಜನಜಾಗೃತಿ ಸಭೆಯಲ್ಲಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ವ್ಯಾಕ್ಸಿನ್ ಚುಚ್ಚುಮದ್ದನ್ನು ಹಾಕಿಸಿಕೊಳ್ಳುವಂತೆ ಹೇಳಿದ ಅವರು ಪಟ್ಟಣದಲ್ಲಿ ಮಾಸ್ಕ್ ಹಾಕದೇ ಸಂಚರಿಸುವವರಿಗೆ ದಂಡ ವಿಧಿಸಲಾಗುವುದು ಕಾರಣ ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಕರೆ ನೀಡಿದರು.
ದಿ. 21 ರಿಂದ ಮೇ 4 ರವರೆಗೆ ರಾಜ್ಯದಲ್ಲಿ 144 ಕಲಂ ಜಾರಿಯಲ್ಲಿದ್ದು, ಔಷಧ ಅಂಗಡಿ, ದಿನಸಿ ಅಂಗಡಿ, ಹಾಲಿನ ಡೇರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಶನಿವಾರ ಮತ್ತು ರವಿವಾರದಂದು ಸಂಪೂರ್ಣ ಲಾಕ್ಡೌನ್ ಆಗಿದ್ದು, ಯಾರು ಮನೆಯಿಂದ ಹೊರಗೆ ಬರಬೇಡಿ. ಸಾರ್ವಜನಿಕರು ಸರ್ಕಾರ ನೀಡುವ ಆದೇಶಗಳನ್ನು ಚಾಚುತಪ್ಪದೇ ಪಾಲಿಸುವಂತೆ ಮನವಿ ಮಾಡಿಕೊಂಡರು.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸಂಜೀವ ಸದಲಗಿ ಮಾತನಾಡಿ ದಿನದಿಂದ ದಿನಕ್ಕೆ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದು, ಮೊನ್ನೆ ಕೊರೋನಾ ನಿಮ್ಮಲ್ಲಿ ವಕ್ಕರಿಸಿದರೆ ಆಗ ನೀವು ಗಳಿಸಿ ಇಟ್ಟ ಹಣ, ಸಂಪತ್ತು ಯಾವುದಕ್ಕೂ ಉಪಯೋಗವಾಗದು. ಕಾರಣ ಹಣ ಹಾಗೂ ಸಂಪತ್ತು ಗಳಿಕೆಗಿಂತ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಕೊರೋನಾ ಹಾವಳಿಯಿಂದ ಬಚಾವ ಆಗುವಂತೆ ಹೇಳಿದರು.
ಈ ಸಮಯದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ರವೀಂದ್ರ ಕಾಂಬಳೆ, ಉಪಾಧ್ಯಕ್ಷೆ ಸುರೇಖಾ ಶಶಿಪಾಲ ಕವಟಗೆ, ಆರೋಗ್ಯ ಅಧಿಕಾರಿ ಬಿ.ಎಂ.ಬೋಳಿಶೆಟ್ಟಿ, ಪಪಂ ಸದಸ್ಯರಾದ ವೃಷಭ ಚೌಗಲಾ, ಶ್ರೀನಿವಾಸ ಕಾಂಬಳೆ, ಸುಭಾಷ ಢಾಲೆ, ಸಂತೋಷ ಮುಜಾವರ, ಶಾಂತಿನಾಥ ಉಪಾಧ್ಯೆ, ಬಾಬಾಸಾಬ ರತ್ನಪ್ಪಗೋಳ, ಅನಿಲ ಸಗರೆ, ಮೋಹನ ಘೋರ್ಪಡೆ, ಮಹಾದೇವ ಮಾಕನ್ನವರ, ಸುನೀಲ ನಾನೀಕರ, ದೀಲಿಪ ಮಾಳಿ ಸೇರಿದಂತೆ ಅನೇಕರು ಇದ್ದರು.