ಗುಳೇಗುಡ್ಡ

ಮುಂದುವರೆದ ಧರಣಿ : ಸೊಸೈಟಿ ಅಧ್ಯಕ್ಷರ ಮೇಲೆ ಕ್ರಮಕ್ಕೆ ಪಟ್ಟು

ಮುಂದುವರೆದ ಧರಣಿ : ಸೊಸೈಟಿ ಅಧ್ಯಕ್ಷರ ಮೇಲೆ ಕ್ರಮಕ್ಕೆ ಪಟ್ಟು
ಗಜಾನನ ನೇಕಾರ ಸೊಸೈಟಿ ಅಧ್ಯಕ್ಷರ ಮೇಲೆ ಕ್ರಮಕ್ಕೆ ಪಟ್ಟು ಹಿಡಿದು ಗುಳೇದಗುಡ್ಡದಲ್ಲಿ ಧರಣಿ ಕುಳಿತಿರುವ ನೇಕಾರ ಮುಖಂಡರು

ಗುಳೇದಗುಡ್ಡ,ಜು.18: ತಮಗೆ ಗಜಾನನ ನೇಕಾರ ಸಂಘದವರಿಂದ ಅನ್ಯಾಯವಾಗಿದೆ. ಮೊದಲು ಅದರ ಅಧ್ಯಕ್ಷರನ್ನು ಇಲ್ಲಿ ಕರೆತಂದು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿರಿ. ಭ್ರಷ್ಠರನ್ನು ರಕ್ಷಣೆ ಮಾಡುವುದನ್ನು ಹಾಗೂ ನಮಗೆ ಬುದ್ದಿ ಹೇಳುವುದನ್ನು ಬಿಟ್ಟು ತಪ್ಪಿತಸ್ಥರನ್ನು ಬಂಧಿಸಿ ಎಂದು ಧರಣಿ ನಿರತ ನೇಕಾರರ ಮುಖಂಡ ಸ್ಥಳೀಯ ಹಿರಿಯ ನಾಗರಿಕರ ಪ್ರಜಾಜಾಗೃತ ವೇದಿಕೆಯ ಅಧ್ಯಕ್ಷ ವಿ.ಜಿ.ಮ್ಯಾಗಿನಹಳ್ಳಿ ಹೇಳಿದ್ದಾರೆ. 

ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಎಲ್ಲವೂ ಗೊತ್ತಿದೆ. ನನಗೆ ಯಾರೂ ಬುದ್ಧಿ ಹೇಳಲು ಬರಬೇಡಿ. ಮೊದಲು ತಪ್ಪಿತಸ್ಥ ನೇಕಾರ ಸೊಸೈಟಿಯ ಅಧ್ಯಕ್ಷನ ಮೇಲೆ ಕ್ರಮ ಕೈಗೊಳ್ಳಿರಿ. ರಾಜಕೀಯ ಮುಖಂಡರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಿಲ್ಲ. ಜಾಗೆ ನಮ್ಮ ಹೆಸರಿನ ಮೇಲೆ ನೋಂದಣಿ ಆಗಬೇಕು. ಭೂ ಪರಿವರ್ತನೇ ನಾವೇ ಮಾಡಿಸುತ್ತೇವೆ. ನಾವೇ ಲೇಓಟ್ ಮಾಡಿಕೊಳ್ಳುತ್ತೇವೆ. ನಮಗೆ ಅಧಿಕಾರವಿರಲಿ. ನೇಕಾರ ಸೊಸೈಟಿ ಅಧ್ಯಕ್ಷನ ಮೇಲೆ ಕ್ರಮಕೈಗೊಳ್ಳಿ ಎಂದು ತಾಲೂಕಿನ ಮೂರು ಪಕ್ಷಗಳ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  

ದಿನೇ ದಿನೇ ಧರಣಿ ಹೊಸ ತಿರುವು ಪಡೆದುಕೊಳ್ಳುತ್ತಿದ್ದೂ, ಅನ್ಯಾಯವಾಗಿರುವ ನೇಕಾರರಿಗೆ ನಿವೇಶನ ಕೊಡಿಸಲು ಪಟ್ಟಣದ ಮೂರೂ ಪಕ್ಷಗಳ ಮುಖಂಡರು ಶನಿವಾರ ತೆಗೆದುಕೊಂಡ ನಿರ್ಣಯವನ್ನೂ ಧರಣಿ ನಿರತ ವಿ.ಜಿ.ಮ್ಯಾಗಿನಹಳ್ಳಿ ತಿರಸ್ಕರಿಸಿ, ಮೊದಲು ತಪ್ಪಿತಸ್ಥರ ಮೇಲೆ ಕ್ರಮವಾಗಲಿ ಎಂದಿದ್ದಾರೆ.   

ಧರಣಿ ಸ್ಥಳಕ್ಕೆ ಇದೇ ಸಂದರ್ಭದಲ್ಲಿ ಭೇಟಿ ನೀಡಿದ ಬಿಜೆಪಿ ಮಾಜಿ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ಉದ್ನೂರ ಮಾತನಾಡಿ, ಸ್ಥಳೀಯ ಮೂರು ರಾಜಕೀಯ ಪಕ್ಷಗಳ ಮುಖಂಡರು ಶನಿವಾರ ಬಂದು ಧರಣಿ ನಿರತರಿಗೆ ತಿಳುವಳಿಕೆ ಹೇಳಿ, ನಿರ್ಣಯ ತೆಗೆದುಕೊಂಡಿದ್ದು ಆರೋಗ್ಯಕರ ಬೆಳವಣಿಗೆ. ಆದರೆ ಧರಣಿ ನಿರತರು ಒಪ್ಪದಿರುವುದು ನನಗೂ ಬೇಸರ ತಂದಿದೆ. ನೇಕಾರರಿಗೆ ನಿವೇಶನ ಕೊಡಿಸಲು ಪಟ್ಟಣದ ಹಿರಿಯರು ಪ್ರಯತ್ನಿಸುತ್ತಾರೆ. ಅವರ ಮಾತಿಗೆ  ಒಪ್ಪಿಕೊಂಡು ಧರಣಿ ಅಂತ್ಯಗೊಳಿಸಲಿ ಎಂದು ಮಾಧ್ಯಮಕ್ಕೆ ತಿಳಿಸಿದರು. 

ನೇಕಾರರ ಧರಣಿ ಅಂತ್ಯ ಕಾಣುವ ಯಾವ ಮುನ್ಸೂಚನೆಗಳೂ ಕಂಡು ಬರುತ್ತಿಲ್ಲ. ಪಟ್ಟಣದ ಮೂರೂ ಪಕ್ಷಗಳ ಹಿರಿಯರ ಮಾತಿಗೂ ಧರಣಿ ನಿರತರು ಒಪ್ಪುತ್ತಿಲ್ಲ. ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಪಟ್ಟು ಹಿಡಿದ ಧರಣಿ  ಯಾವ ರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕು.  

ಸುದ್ದಿ ಓದಿ