ಜೆಡಿಯುನಿಂದ ರಾಜ್ಯಾದ್ಯಂತ 50 ಕ್ಷೇತ್ರಗಳಲ್ಲಿ ಸ್ಪರ್ಧೆ: ಶಂಕರ್ ಗೌಡ
ರಾಣೆಬೆನ್ನೂರ 11: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷದಿಂದ ರಾಜ್ಯಾದ್ಯಂತ 50 ಸ್ಥಾನಗಳಿಗೆ ಸ್ಪರ್ಧೆ ಮಾಡುವುದಾಗಿ ಜೆಡಿಯು ರೈತ ಮೋರ್ಚಾ ರಾಜ್ಯ ಕಾರ್ಯಾಧ್ಯಕ್ಷ ಶಂಕರಗೌಡ ಗಂಗನಗೌಡ್ರ ಹೇಳಿದರು.
ಸೋಮವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷವು ಹೆಚ್ಚಿನ ಪ್ರಚಾರ ಇಲ್ಲದ ಕಾರಣ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಬಾರಿ ಸ್ಪರ್ಧೆ ಅನಿವಾರ್ಯವಾಗಿದೆ ಎಂದರು. ಮತದಾರರಿಗೆ ಪಕ್ಷದಿಂದ ಯಾವುದೇ ರೀತಿಯ ಆಶ್ವಾಸನೆ ನೀಡುವುದಿಲ್ಲ. ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡುವ ಕಾರ್ಯಕ್ಕೆ ಮುಂದಾಗುವುದಾಗಿ ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅವ್ಯವಹಾರ, ಲಂಚದ ಹಾವಳಿ ಸೇರಿದಂತೆ ಇತರ ಅಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ಭ್ರಷ್ಟಾಚಾರ ತೊಲಗಲು ಮತದಾರರು ಸಹ ಮುಂದಾಗಬೇಕು ಎಂದರು.
ರಾಣೇಬೆನ್ನೂರ ವಿಧಾನಸಭಾ ಕ್ಷೇತ್ರದಿಂದ ನಾನೂ ಸಹ ಸ್ಪರ್ಧೆ ಮಾಡುತ್ತೇನೆ. ಮುಂಬರುವ ದಿನಗಳಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಾಟೀಲ ಸೇರಿದಂತೆ ಮತ್ತಿತರರ ಮುಖಂಡರು ಚುನಾವಣಾ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಲಿದ್ದಾರೆ ಎಂದರು. ಸುನಿತಾ ಗಂಗನಗೌಡ್ರ, ಸುಭಾಷ್ ಹಂಸಾಗರ ಮತ್ತಿತರರು ಇದ್ದರು.