ನರೇಂದ್ರ ಮಳೆಪ್ಪಜ್ಜನಮಠದ ದುಂಡಯ್ಯ ಸ್ವಾಮೀಜಿ ಅಗಲಿಕೆಗೆ ಅಮ್ಮಿನಬಾವಿ ಶ್ರೀಗಳ ಸಂತಾಪ
ಧಾರವಾಡ 12: ರವಿವಾರ ಲಿಂಗೈಕ್ಯರಾದ ತಾಲೂಕಿನ ನರೇಂದ್ರ ಗ್ರಾಮದ ಶ್ರೀಮಳೆಪ್ಪಜ್ಜನಮಠದ ಶ್ರೀದುಂಡಯ್ಯ ಸ್ವಾಮೀಜಿ ಅಗಲಿಕೆಗೆ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಸರಳತೆ, ಸಜ್ಜನಿಕೆ, ಹದುಳವ್ಯಕ್ತಿತ್ವದ ನಡೆ-ನುಡಿಗಳಿಂದ ಅಪಾರ ಸಂಖ್ಯೆಯ ಭಕ್ತ ಸಮುದಾಯದ ಗೌರವಕ್ಕೆ ಪಾತ್ರರಾಗಿದ್ದ ದುಂಡಯ್ಯ ಸ್ವಾಮೀಜಿ, ಗ್ರಹಸ್ಥರಾದರೂ ಸಹಿತ ವೀರಶೈವ ಧರ್ಮದ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ತತ್ವಗಳಲ್ಲಿ ಬದ್ಧತೆಯನ್ನು ಹೊಂದಿದ್ದರು. ಭಕ್ತಗಣವು ಧರ್ಮ ಮಾರ್ಗದಿಂದ ನಡೆಯಲು ನಿರಂತರ ಮಾರ್ಗದರ್ಶನ ಮಾಡಿದ್ದ ಇವರ ಅಗಲಿಕೆಯು ವ್ಯಾಪಕ ಬೇಸರವನ್ನು ತಂದಿದೆ ಎಂದು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.