ಮೈಕ್ರೋಫೈನಾನ್ಸ್ನವರ ಕಿರುಕುಳ ಮತ್ತು ಗೂಂಡಾ ವರ್ತನೆಯನ್ನು ಖಂಡನೆ
ರಾಣಿಬೆನ್ನೂರ 03: ನಗರದಲ್ಲಿ ಖಾಸಗಿ ಹಾಗೂ ಮೈಕ್ರೋಫೈನಾನ್ಸ್ನವರ ಕಿರುಕುಳ ಮತ್ತು ಗೂಂಡಾ ವರ್ತನೆಯನ್ನು ಖಂಡಿಸಿ, ನೊಂದ ಮಹಿಳೆಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಾಹಶೀಲ್ದಾರ ಆರ್.ಎಚ್. ಭಾಗವಾನ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿನ ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ಪ್ರತಿಭಟನೆ ಮೆರವಣಿಗೆಯು ಬಸ್ ನಿಲ್ದಾಣದವರೆಗೆ ಸಂಚರಿಸಿ ಅಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನೊಂದ ಮಹಿಳೆಯರಿಂದ ಮನವಿ ಸಲ್ಲಿಸಿದರು.
ನಗರದಲ್ಲಿ ಖಾಸಗಿ ಹಾಗೂ ಮೈಕ್ರೋಫೈನಾನ್ಸ್ನವರ ಕಿರುಕುಳದಿಂದ ನೊಂದ ಮಹಿಳೆಯರು ಬೇಸತ್ತು ಆತ್ಮಹತ್ಯೆಯಂತಹ ದಾರಿಗೆ ಮುನ್ನುಗ್ಗುತ್ತಿದ್ದಾರೆ ಹೀಗಾಗಿ ಅವರ ರಕ್ಷಣೆಗೆ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆ ಮುಂದಾಗಬೇಕು. ನಗರದಲ್ಲಿ ಖಾಸಗಿ ಫೈನಾನ್ಸ್ಗಳು ನಾಯಿಕೊಡೆಯಂತೆ ಹುಟ್ಟಿಕೊಂಡಿದ್ದು ಅವರು ಗುಂಪುಗಳಿಗೆ ಲೋನ್ ಕೊಟ್ಟು, ದುಪ್ಪಟ್ಟು ಬಡ್ಡಿಯನ್ನು ವಸೂಲಿ ಮಾಡುವಂತಹ ದುಂಡಾವರ್ತನೆ ಮಾಡುತ್ತಾ ಮನೆಯ ಮುಂದೆ ನಿಂತು ಹಣ ಮತ್ತು ಅದರ ಬಡ್ಡಿಯನ್ನು ಕಟ್ಟುವಂತೆ ಮನೆಯ ಮುಂದೆ ಅವಮಾನಗೊಳಿಸುತ್ತಾ ಮನೆ ಬೀಗ ಹಾಕುತ್ತೇವೆ. ಹರಾಜು ಮಾಡುತ್ತೇವೆ ಎಂದು ಅವರ ಮೇಲೆ ಇಲ್ಲಸಲ್ಲದ ಮಾತುಗಳನ್ನಾಡುತ್ತಾ ಮರ್ಯಾದೆ ತೆಗೆಯುವಂತಹ ಕೆಲಸವನ್ನು ಗೂಂಡಾ ವರ್ತನೆಯ ರೀತಿಯಲ್ಲಿ ನಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಮಾಡುತ್ತಾರೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಾಲೂಕ ಅದಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಖಾಸಗಿ ಫೈನಾನ್ಸ್ ವ್ಯಕ್ತಿಗಳನ್ನು ಕರೆಯಿಸಿ ಅವರ ನಿಯಮಾವಳಿಗಳ ಪ್ರಕಾರ ವಸೂಲಿ ಮಾಡುವಂತೆ ಮತ್ತು ಕಾಲಾವಕಾಶಗಳನ್ನು ಕೊಡಿಸಿ ಹಣ ವಸೂಲಿ ಮಾಡಿಕೊಳ್ಳಲಿಕ್ಕೆ 6 ರಿಂದ 8 ತಿಂಗಳ ಕಾಲಾವಕಾಶವನ್ನು ಕೊಡುವಂತೆ ಆದೇಶಿಸಬೇಕು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.
ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಲಲಿತಾ ಲಮಾಣಿ, ಬಸವ್ವ ಮೈದೂರು ಸೇರಿದಂತೆ ನೂರಾರು ನೊಂದ ಮಹಿಳೆಯರು ಪ್ರತಿಭಟನೆಯಲ್ಲಿ ಇದ್ದರು.