ಡಿ.9ರಂದು ಲಿಂ.ಶರಣ ಡಾ.ಈಶ್ವರ ಮಂಟೂರ ಅವರ ಪುಣ್ಯ ಸ್ಮರಣೋತ್ಸವ
ಲೋಕದರ್ಶನ ವರದಿ,
ಜಮಖಂಡಿ: 29: ಶರಣ ಸಂಸ್ಕೃತಿ ಉತ್ಸವ, ಜಾನಪದ ಕಲಾಮಹೋತ್ಸವ ಹಾಗೂ ಲಿಂ.ಶರಣ ಡಾ.ಈಶ್ವರ ಮಂಟೂರ ಅವರ ದ್ವಿತೀಯ ಪುಣ್ಯ ಸ್ಮರಣೋತ್ಸವ ಡಿ.9ರಂದು ಜರುಗಲಿದೆ ಎಂದು ಇಳಕಲ್ನ ವಿಜಯಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹುನ್ನೂರ-ಮಧುರಖಂಡಿ ಗ್ರಾಮಗಳ ಬಸವಜ್ಞಾನ ಗುರುಕುಲದ ಆಶ್ರಯದಲ್ಲಿ ಮಹಾಂತ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಲಿಂ.ಶರಣಶ್ರೀ ಡಾ.ಈಶ್ವರ ಮಂಟೂರ ಅವರ ಕುರಿತು ಒಂದು ಉಪನ್ಯಾಸ ನಡೆಯಲಿದೆ. ಪ್ರತಿ ವರ್ಷದಂತೆ ಬಸವಚೇತನ, ಕೃಷಿಚೇತನ, ಕಲಾಚೇತನ ಹಾಗೂ ಈಶಚೇತನ ಪ್ರಶಸ್ತಿಗಳನ್ನು ಸಾಧಕರಿಗೆ ನೀಡಿ ಗೌರವಿಸಲಾಗುವುದು. ಅಂದು ಬೆಳಿಗ್ಗೆ 9 ಗಂಟೆಗೆ ಷಟಸ್ಥಲ್ ಧ್ವಜಾರೋಹಣ, ಬಸವ ಪುತ್ಥಳಿಗೆ ಪುಷ್ಪವೃಷ್ಟಿ, ವಚನ ಪಲ್ಲಕ್ಕಿ ಉತ್ಸವಕ್ಕೆ ಚಾಲನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿವೆ. ಕಾರ್ಯಕ್ರಮದ ಮುಖ್ಯ ಅತಿಥಿಗಳನ್ನು ಹಾಗೂ ಸಾಧಕರನ್ನು ಶೀಘ್ರದಲ್ಲಿ ಗುರುತಿಸಲಾಗುವುದು ಎಂದು ಸಮಗ್ರ ಮಾಹಿತಿ ನೀಡಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ, ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಮುಧೋಳದ ಕಲ್ಲಪ್ಪ ಸಬರದ, ಸಾಹಿತಿ ಸಿದ್ದು ದಿವಾಣ, ನಿವೃತ್ತ ಮುಖ್ಯ ಶಿಕ್ಷಕ ವಿ.ಕೆ. ಗಿರಡ್ಡಿ ಸಲಹೆ ಸೂಚನೆಗಳನ್ನು ನೀಡಿದರು. ಡಾ.ಎನ್.ವಿ. ಅಸ್ಕಿ ನಿರೂಪಿಸಿದರು.