ಸೌಲಭ್ಯ ವಂಚಿತ ಕಾರಣದಿಂದ ಕಿಡಿ ಕಾರುತ್ತಿರುವ ತರಳಬಾಳು ನಗರದ ನಾಗರಿಕರು
ರಾಣೇಬೆನ್ನೂರು :ಜು 24 ಇಂದಿನ ವಾಣಿಜ್ಯ ನಗರ ರಾಣೆಬೆನ್ನೂರು, ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂಬ ಹೆಗ್ಗಳಿಕೆ ನಗರದ ಸಾರ್ವಜನಿಕರಲ್ಲಿ ಮತ್ತು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಲೇ ಇದೆ. ಆದರೆ ವಾಸ್ತವ ಸ್ಥಿತಿಯಲ್ಲಿ ಮಾಧ್ಯಮಗಳು ಬಿತ್ತರಿಸುವಂತೆ ಇಲ್ಲ!! ಎನ್ನುತ್ತಾರೆ ಹಲಗೇರಿ ರಸ್ತೆ ಹತ್ತಿರದ, ಹೊಸ ಬಡಾವಣೆ ತರಳಬಾಳು ನಗರದ 2ನೇ ಕ್ರಾಸಿನ ನೂರಾರು ನಾಗರಿಕರು.
ಅಲ್ಲಿನ ನಾಗರಿಕರು ಆರೋಪಿಸುವಂತೆ ಮಾಧ್ಯಮ ಲೋಕದರ್ಶನ ಭೇಟಿ ನೀಡಿದಾಗ ಕಂಡುಬಂದ ವಾಸ್ತವಿಕ ಸ್ಥಿತಿ ಹಿಗಿದೇ.
ಕಳೆದ ವಾರದಿಂದ ಭರಪುರು ಸುರಿಯುತ್ತಿರುವ ಮಳೆಯಿಂದಾಗಿ, ಪಕ್ಕಾ ರಸ್ತೆ ಇಲ್ಲದ ಕಾರಣ, ನೀರು ನಿಂತು ರಾಡಿ,ರಾಡಿ, ನಗರ ಪ್ರದೇಶದಿಂದ ಮನೆ ತಲುಪಬೇಕಾದರೆ ಹರ ಸಾಹಸ ಪಡುವಂತಾಗಿದೆ.
ಬಡಾವಣೆ ನಿರ್ಮಾಣವಾಗಿ ಹಲವಾರು ವರ್ಷಗಳ ಗತಿಸಿವೆ, ಸರಿಯಾದ ಕುಡಿಯುವ ನೀರಿಲ್ಲ. ದಿನದ 24 ತಾಸು ನೀರು ಸಂಪರ್ಕಭಾಗ್ಯ ಇಲ್ಲಿ ವಾಸಿಸುವ ನಾಗರಿಕರಿಗೆ ಲಭ್ಯವಾಗಿಲ್ಲ. 25 ಹೆಚ್ಚು ಮನೆಗಳು ಇಲ್ಲಿ ನಿರ್ಮಾಣವಾಗಿದೆ 150ಕ್ಕೆ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕನಿಷ್ಠ ಹೊಳೇ ನೀರಾದರೂ ಹರಿಸಿರಿ ಎಂದು ಹಲವಾರು ಬಾರಿ, ನಗರಸಭೆಗೆ ಮನವಿ ಸಲ್ಲಿಸಿದ್ದರು ಪ್ರಯೋಜನವಿಲ್ಲ. ಹಾಗಾದರೆ ಮೂಲಭೂತ ಸೌಲಭ್ಯ ಕೊಡುವುದು ಯಾರ ಜವಾಬ್ದಾರಿ?. ಎಂದು ಕಿಡಿ ಕಾರುತ್ತಾರೆ ತರಳಬಾಳು ನಗರದ ನಾಗರಿಕರು.
ಮೂಲಭೂತ ಸೌಲಭ್ಯ ವಂಚಿತ ಈ ತರಳಬಾಳು ನಗರ 34ನೇ ವಾರ್ಡ್ ನಲ್ಲಿದೆ. ಈ ವಾರ್ಡು ಪ್ರತಿನಿಧಿಸಿರುವ ನಗರಸಭೆ ಸದಸ್ಯರು ಸಾಮಾಜಿಕ ಕಾಳಜಿ ಉಳ್ಳವರಾಗಿದ್ದಾರೆ. ಸೌಲಭ್ಯ ನೀಡಿರಿ,ತಾವು ಏಕೆ ಸುಮ್ಮನೆ ಇದ್ದೀರಾ? ಎಂದು ಕೇಳಿದರೆ, ಸದ್ಯ ಬಜೆಟ್ ಇಲ್ಲ. ಈ ಕಾರಣದಿಂದ ಅಭಿವೃದ್ಧಿ ಕುಂಠಿತವಾಗಿದೆ ಎನ್ನುತ್ತಾರೆ ಅವರು ಎಂದು ಅಲ್ಲಿನ ವಾಸಿಗಳು ಪ್ರತಿಕ್ರಿಯಿಸಿದ್ದಾರೆ. ಸೌಲಭ್ಯ ವಂಚಿತ ಕಾರಣದಿಂದ, ಇಲ್ಲಿ ನಿವೇಶನ ಖರೀದಿಸಿದವರು, ಕಟ್ಟಡ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ. 25 ಹೆಚ್ಚು ಪ್ಲಾಟಗಳು ಇಲ್ಲಿವೆ. ಈಗಾಗಲೇ 15 ಪ್ಲಾಟ್ಗಳಲ್ಲಿ ಮನೆ ನಿರ್ಮಿಸಲಾಗಿದೆ. ನಿರ್ಮಿತವಾಗಿರುವ ಮನೆಗಳಲ್ಲಿ ಸೌಲಭ್ಯ ಇಲ್ಲದ ಕಾರಣ ವಾಸಿಸುವುದೇ ಕಷ್ಟವಾಗಿದೆ ಎಂದು ಅಲ್ಲಿನ ವಾಸಿಗಳ ದಯನೀಯ ಅಳಲು.
ಕಳೆದ ಮೂರು ವರ್ಷಗಳಿಂದ 24*2 ಶುದ್ಧ ಕುಡಿಯುವ ನೀರು ಲಭ್ಯವಿಲ್ಲದ ಕಾರಣ ಫ್ಲೋರೈಡ್ ಮಿಸ್ರಿತ ನೀರು ಸೇವಿಸುವುದು ಅನಿವಾರ್ಯವಾಗಿದೆ. ಪರಿಣಾಮ ದಿನನಿತ್ಯ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರು ಇದ್ದೇ ಇರುತ್ತದೆ ಎನ್ನುವ ಇಲ್ಲಿನ ವಾಸಿಗಳು ನಗರಸಭೆ ಕೂಡಲೆ ಎಚ್ಚೆತ್ತುಕೊಂಡು, ಮೂಲಭೂತ ಸೌಲಭ್ಯ ಜೊತೆಗೆ ಪಕ್ಕಾ ರಸ್ತೆ, ಉತ್ತಮ ಗಟಾರು, ಸ್ವಚ್ಛತೆ, ದಿನದ 24 ತಾಸು ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದಲ್ಲಿ, ಮುಂದಿನ ದಿನಮಾನಗಳಲ್ಲಿ ತರಳಬಾಳು ನಗರದ ವಾಸಿಗಳು ನಗರಸಭೆ ಮುಂಭಾಗ ಪ್ರತಿಭಟಿಸಿ, ಧರಣೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕೋಡಿಹಳ್ಳಿ ಪ್ರತಿಕ್ರಿಯೆ :- ನಮ್ಮ 34ನೇ ವಾರ್ಡ್ ಬಹುದೊಡ್ಡ ವಾರ್ಡ, ನಗರಸಭೆ ತೆಗೆದಿರಿಸಿದ 5 ಲಕ್ಷಕ್ಕೂ ಮೇಲ್ಪಟ್ಟ ಹಣ ಹಾಕಿ ಏನು ಅಭಿವೃದ್ಧಿಪಡಿಸಲಿ!. ಎಲ್ಲಿ ಹಾಕಲಿ. ಅದಕ್ಕಾಗಿ, ತಾವು ಈಗಾಗಲೇ ಈ ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ಕ್ರಿಯಾಯೋಜನೆಯನ್ನು ಮಾಡಿಸಿದ್ದೇನೆ. ಸದ್ಯ ಬಜೆಟ್ ಇಲ್ಲ, ನಗರಸಭೆ ಸ್ಥಾನಿಕ ಅಧ್ಯಕ್ಷರ ಆಡಳಿತವೂ ಇಲ್ಲ. ಬಜೆಟ್ ಬಂದ ನಂತರ ಪರಿಪೂರ್ಣವಾಗಿ ಅಭಿವೃದ್ಧಿಪಡಿಸಲು. ನಾನು ಸದಾ ಸಿದ್ಧನಿದ್ದೇನೆ- ನಿಂಗರಾಜ ಕೋಡಿಹಳ್ಳಿ,34ನೇ ವಾರ್ಡ್ ಸದಸ್ಯರು, ನಗರ ಸಭೆ ರಾಣೇಬೆನ್ನೂರ