ರಾಣೆಬೆನ್ನೂರ

ಮಕ್ಕಳು ಶಿಕ್ಷಣ ಪರಿಪೂರ್ಣತೆಗೆ ಸಾಂಸ್ಕೃತಿಕವಾಗಿ ಬೆಳೆಯಬೇಕು: ಬಿಇಒ ಎಂ.ಎಚ್‌.ಪಾಟೀಲ

ಮಕ್ಕಳು ಶಿಕ್ಷಣ ಪರಿಪೂರ್ಣತೆಗೆ ಸಾಂಸ್ಕೃತಿಕವಾಗಿ ಬೆಳೆಯಬೇಕು: ಬಿಇಒ ಎಂ.ಎಚ್‌.ಪಾಟೀಲ

ಕ್ಲಸ್ಟರ್ ಮಟ್ಟದ ಪ್ರಾ. ಶಾಲೆಗಳ ಪ್ರತಿಭಾ ಕಾರಂಜಿ 

ರಾಣೇಬೆನ್ನೂರು 09: ಇಂದಿನ ಮಕ್ಕಳು ತಮ್ಮ ಶೈಕ್ಷಣಿಕ ಪರಿಪೂರ್ಣತೆ ಹೊಂದಬೇಕಾದರೆ ಪ್ರತಿಯೊಬ್ಬರೂ ಈ ನೆಲದ ದೇಸಿಯ ಭಾಷೆಯ ಮತ್ತು ಆಯಾ ಸಂಸ್ಕೃತಿಯ ಪರಂಪರೆಯ ಕಲೆ, ಸಾಹಿತ್ಯ, ಸಂಗೀತ ಅಳವಡಿಸಿಕೊಂಡು ಬೆಳೆಯಬೇಕಾದ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ ಹೇಳಿದರು. 

ಅವರು ಇಲ್ಲಿನ ಮಾರುತಿ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ನಂ.6 ಆವರಣದಲ್ಲಿ ನಡೆದ ರಾಣೇಬೆನ್ನೂರು ಉರ್ದು ನಗರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ 2023-24ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಂಸ್ಕೃತಿಕ ಕಲೆಗಳಲ್ಲಿ ಯಾವುದೇ ದೇಶ, ಭಾಷೆ, ಬಾವವಿಲ್ಲ. ಎಲ್ಲವೂ ಜನಪದ ಸಂಸ್ಕೃತಿಯ ತಳಹದಿಯಲ್ಲಿ ನಿರ್ಮಾಣವಾಗಿವೆ. ಇವುಗಳ ಮೂಲಕ ನಮ್ಮ ಇಂದಿನ ಮಕ್ಕಳು ಸಾಂಸ್ಕೃತಿಕತೆಯನ್ನು ಅಳವಡಿಸಿಕೊಂಡು ಬೆಳೆದಾಗ ಮಾತ್ರ ಸಮಗ್ರ ಶಿಕ್ಷಣದ ಜೊತೆಗೆ ಪರಿಪೂರ್ಣತೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು ಎಂದರು. 

ಅಧ್ಯಕ್ಷತೆ ವಹಿಸಿದ್ದ ಎಸ್‌.ಡಿ.ಎಂ.ಸಿ ಅಧ್ಯಕ್ಷ ಸೈಯದ್‌ಪೀರ್ ಕಾಗಿನೆಲೆ ಮಾತನಾಡಿ ಮಕ್ಕಳಲ್ಲಿ ಸುಪ್ತವಾದ ಪ್ರತಿಭೆ ಅಡಗಿರುತ್ತದೆ. ಅವುಗಳನ್ನು ಹೊರ ಸೂಸಲು ವೇದಿಕೆಗಳ ಅಗತ್ಯವಿದೆ. ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಕಲೆಗಳನ್ನು ಪ್ರತಿಬಿಂಬಿಸಲು ಉತ್ತಮ ವೇದಿಕೆಯಾಗಿದೆ ಎಂದರು. 

ಮುಖ್ಯ ಅತಿಥಿಯಾಗಿದ್ದ ನಗರಸಭಾ ಸದಸ್ಯ ಪಿ.ಜೆ.ಮರಿಯಮ್ಮನವರ  ಈ ನಾಡಿನ ಸಾಂಸ್ಕೃತಿಕ ಪರಂಪರೆ ವಿಶ್ವದಲ್ಲಿಯೇ ಬಹು ವಿಶಿಷ್ಟತೆಯಿಂದ ಕೂಡಿದೆ. ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿಯ ಹರಿಕಾರರು. ಅವರಲ್ಲಿರುವ ಕಲೆಯನ್ನು ಭವಿಷ್ಯದ ಜನಾಂಗ ತಮ್ಮ ನಿತ್ಯದ ಶಿಕ್ಷಣದ ಜೊತೆಗೆ ತರಬೇತಿ ಪಡೆದು ಸಂಸ್ಕೃತಿಯ ಕಲೆಗಳನ್ನು ಉಳಿಸಿ ಬೆಳೆಸುವ ಬಹು ದೊಡ್ಡ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದರು. 

ಮತ್ತೋರ್ವ ಅತಿಥಿ ಶ್ರೀ ತುಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಮಾತನಾಡಿ, ಸಮಾಜದಲ್ಲಿ ಗುರುತಿಸಿಕೊಳ್ಳಬೇಕಾದರೆ ಶಾಲಾ ಮಕ್ಕಳು ಪರಂಪರೆಯಾಗಿ ಬಂದಿರುವ ನಮ್ಮ ಸಂಸ್ಕೃತಿಯ ಸಾಂಸ್ಕೃತಿಕ ಕಲೆಗಳನ್ನು ಅಳವಡಿಸಿಕೊಂಡು ಬೆಳೆಯಬೇಕು. ಇದರಿಂದ ಕಲಿತ ಶಾಲೆ, ಕಲಿಸಿದ ಗುರುಗಳಿಗೆ, ಪಾಲಕರಿಗೆ ಕೀರ್ತಿ ತಂದಂತಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಿಂಗರಾಜ ಸುತ್ತಕೋಟಿ, ಎನ್‌ಜಿಒ ಅಧ್ಯಕ್ಷ ಎಂ.ಡಿ.ದ್ಯಾಮಣ್ಣನವರ, ಕೆಎಸ್‌ಪಿಎಸ್‌ಟಿಎ ತಾಲೂಕಾಧ್ಯಕ್ಷ ಹೇಮಂತ್ ಎಸ್‌.ಕೆ., ಡಿಡಿಪಿಐ ಕಛೇರಿಯ ಉರ್ದು ಶಿಕ್ಷಣ ಸಂಯೋಜಕ ಸಿಕಂದರ ಮುಲ್ಲಾ, ಡಿಆರ್‌ಪಿ ನಸ್ರೀನ್ ಮನಿಯಾರ್, ಪ್ರಧಾನ ಗುರು ಎಂ.ಎ ತಾಸೇವಾಲೆ, ನಗರ ಸಿಆರ್‌ಪಿ ಸುಹೀಲ್ ಅಹ್ಮದ್ ರಟ್ಟಿಹಳ್ಳಿ, ಉರ್ದು ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಯ್‌.ಐ.ಹರಿಗೋಲ ಸೇರಿದಂತೆ ಮತ್ತಿತರ ಗಣ್ಯರು, ಎಸ್‌.ಡಿಎಂಸಿ ಸದಸ್ಯರು ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. 

ಫಾತಿಮಾ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಐ.ಎಸ್‌.ಕಿಲ್ಲೇದಾರ ಸ್ವಾಗತಿಸಿದರು. ಸುಹೀಲ್ ರಟ್ಟಿಹಳ್ಳಿ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ