ಮಕ್ಕಳಿಗೆ ಬಾಲ್ಯದಲ್ಲಿಯೇ ವ್ಯವಹಾರಿಕ ಜ್ಞಾನ ಬೆಳೆಸುವುದು ಅಗತ್ಯ: ನಲವಡೆ
ಬೈಲಹೊಂಗಲ 12: ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಎಂಬ ನುಡಿಯಂತೆ ಮಕ್ಕಳಿಗೆ ಬಾಲ್ಯದಲ್ಲಿಯೇ ವ್ಯವಹಾರಿಕ ಜ್ಞಾನ ಬೆಳೆಸುವುದು ಅಗತ್ಯವಾಗಿದೆ ಎಂದು ಶಿಕ್ಷಣ ಪ್ರೇಮಿ ನಾರಾಯಣ ನಲವಡೆ ನುಡಿದರು.
ಅವರು ತಾಲೂಕಿನ ನಯಾನಗರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಹಿರಿಯ ಶಿಕ್ಷಕ ಬಸವರಾಜ ಪತ್ತಾರ ಇವರ ಮಾರ್ಗದರ್ಶನದಲ್ಲಿ ರಚನೆಯಾದ ಮಕ್ಕಳ ಸಂಘಟನೆ ಗ್ರಾಹಕರ ಶಿಕ್ಷಣ ಮತ್ತು ರಕ್ಷಣಾ ವೇದಿಕೆ ಅಡಿಯಲ್ಲಿ ಮಕ್ಕಳ ಸಂತೆಗೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯವಹಾರಿಕ ಜ್ಞಾನ ಅಗತ್ಯವಾಗಿದೆ. ಮಕ್ಕಳು ಸ್ವಂತ ಖರೀದಿಸಿ, ಮಾರಾಟದ ಬೆಲೆ ನಿರ್ಧಾರ ಮಾಡಿ, ಜನರೊಂದಿಗೆ ಬೆರೆತು ಮಾರಾಟ ಮಾಡುವ ಕಲೆ, ತೂಕ ಲಾಭ ನಷ್ಟದ ಲೆಕ್ಕಾಚಾರ ಉಳಿತಾಯ ಮನೋಭಾವನೆ ಹೊಂದಲು ಅತ್ಯಂತ ಸಹಕಾರಿ ಎಂದರು.
ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಎಲ್ಲ ತರದ ತರಕಾರಿ, ಗಡ್ಡೆ ಗೆನಸುಗಳು, ಉಪಹಾರ, ಮೊಟ್ಟೆ, ಬೆಲ್ಲದ ಚಹಾ, ಪಾಸ್ಟ್ ಪುಡ್, ಟೆಂಗಿನ ಕಾಯಿಗಳು, ಎಲ್ಲಾ ತರದ ಕಾಳುಗಳು, ನೆನೆಸಿದ ಕಾಳುಗಳು, ಕಡ್ಲೆ ಗಿಡಗಳು, ಎಳೆ ನೀರು, ಕಬ್ಬಿಣ ಹಾಲು, ಎಲ್ಲಾ ತರದ ಸ್ಟೇಷನರಿ ಸಾಮಗ್ರಿಗಳು, ಶಾಲಾ ಮಕ್ಕಳಿಗೆ ಅವಶ್ಯಕ ಪೆನ್ನು ಪುಸ್ತಕ, ಪೆನ್ಸಿಲ್, ಬಟ್ಟೆಗಳು, ಸೀರೆಗಳು, ಸಿಹಿ ತಿನಿಸುಗಳು, ಸಂಪಿಗೆ ಸೇರಿದಂತೆ ಎಲ್ಲಾ ತರದ ಹಣ್ಣು, ಹೂವುಗಳು ಮಾಲೆಗಳು ಮಕ್ಕಳ ಸಂತೆಗೆ ಮೆರಗು ನೀಡಿ, ಮಕರಂದ ಬೀರಿದ್ದು ವಿಶೇಷವಾಗಿತ್ತು. ಮಕ್ಕಳ ಸಂತೆಯಲ್ಲಿ ನಿಜವಾದ ಸಂತೆಗೆ ಸಮನಾಗಿತ್ತು ಎಂದು ಗ್ರಾಮಸ್ಥರು ಕೊಂಡಾಡಿದರು. ಅಂದಾಜು ಐವತ್ತು ಸಾವಿರ ಮೆಲ್ಪಟ್ಟು ವ್ಯವಹಾರವಾಗಿದ್ದು ವಿಶೇಷವಾಗಿತ್ತು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ನಾಗೇಶ ಮಾಳನ್ನವರ, ಎ.ಎಂ.ಸಂಗೊಳ್ಳಿ, ಪ್ರಾಥಮಿಕ ಯಲ್ಲಪ್ಪ ಏಣಗಿ, ಪಂಚಾಯತ ಸದಸ್ಯರಾದ ರವಿ ಹುಡೇದ, ಉಮೇಶ ಹುಲಮನಿ, ಬಸವರಾಜ ಕಡಕೋಳ, ಮಹಾಂತೇಶ ಮರೆಕ್ಕನವರ, ಎಸ್ಡಿಎಂಸಿ ಸದಸ್ಯರಾದ ಮಲ್ಲಪ್ಪ ಏಣಗಿ, ಮುದಕಪ್ಪ ತೋಟಗಿ, ವೀರಣಗೌಡ ಹುಲೆಪ್ಪನವರ, ಎರಡೂ ಶಾಲೆಯ ಗುರುಗಳು, ಗುರುಮಾತೆಯರು, ಮಕ್ಕಳು ಸೇರಿದಂತೆ ಗ್ರಾಮದ ಸಮಸ್ತ ಗುರು ಹಿರಿಯರು, ಪಾಲಕ ಪೋಷಕರು ಮಕ್ಕಳ ಸಂತೆಯನ್ನು ಯಶಸ್ವಿಗೊಳಿಸಿದರು.