ಭಾರತದಲ್ಲಿ ಬಾಲ್ಯ ವಿವಾಹ ಹೆಚ್ಚಳವಾಗಿದೆ: ಎಸ್.ಎಲ್. ಲಾಡಖಾನ್
ರಾಣೆಬೆನ್ನೂರು 07: ಭಾರತ ದೇಶದಲ್ಲಿ ಇತರೆ ಎಲ್ಲಾ ದೇಶಗಳಿಗಿಂತಲೂ ಬಾಲ್ಯ ವಿವಾಹಗಳು ಹೆಚ್ಚಳವಾಗುತ್ತಿರುವುದು ಕಂಡುಬರುತ್ತಲಿದೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಎಸ್ ಎಲ್ ಲಾಡ ಖಾನ್ ಹೇಳಿದರು.
ಅವರು, ಮಂಗಳವಾರ ಇಲ್ಲಿನ ಅಂಜುಮನ್ ಇಸ್ಲಾಂ ಶಿಕ್ಷಣ ಸಂಸ್ಥೆಯ, ಉರ್ದು ಹೈಸ್ಕೂಲ್ ಮೈದಾನದಲ್ಲಿ ನ್ಯಾಯಾವಾದಿಗಳ ಸಂಘ, ತಾಲೂಕಾ ಆಡಳಿತ, ಪೊಲೀಸ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ, ಬಾಲ್ಯ ವಿವಾಹ ತಡೆ ಜನಜಾಗೃತಿ ಜಾತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿರುವ ವರದಿಗಳಿವೆ ಹಾಗೂ ಈ ಸಮಾಜದಲ್ಲಿ ಮಕ್ಕಳಿಗೆ ಜೀವಿಸುವ ಹಕ್ಕಿದೆ ಆದರೆ ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ, ಬಾಲ್ಯ ವಿವಾಹವನ್ನು ತಡೆಗಟ್ಟುವುದು ಸಾರ್ವಜನಿಕರ ಕರ್ತವ್ಯವಾಗಿರುತ್ತದೆ ಮತ್ತು ಬಾಲ್ಯ ವಿವಾಹವು ನಡೆಯುತ್ತಿರುವುದು ಎಲ್ಲಿಯಾದರೂ ಕಂಡು ಬಂದಲ್ಲಿ ತಮ್ಮ ಶಿಕ್ಷಕರ ಗಮನಕ್ಕೆ ಅಥವಾ ತಾಲೂಕಾ ಕಾನೂನು ಸೇವಾ ಸಮಿತಿಗೆ ಮಾಹಿತಿಯನ್ನು ನೀಡಬೇಕು ಎಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಹೆಚ್. ಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಬಿ. ಎಚ್. ಬುರಡಿಕಟ್ಟಿ, ಕಾರ್ಯದರ್ಶಿ ಎನ್. ಎಮ್. ದೊಂಬರ ಸೇರಿದಂತೆ, ಸಂಘಟನೆಯ ಪದಾಧಿಕಾರಿಗಳು, ಶಿಕ್ಷಣ ಸಂಸ್ಥೆಯ ಮುಖಂಡರು ಎಲ್ಲಾ ಪ್ಯಾನಲ್ ನ್ಯಾಯವಾದಿಗಳು, ಶಿಕ್ಷಕರು, ವಿಧ್ಯಾರ್ಥಿಗಳು ಜಾಗೃತಿ ಜಾತಾದಲ್ಲಿ ಪಾಲ್ಗೊಂಡಿದ್ದರು.