ಕಾಗವಾಡ

ಆರ್‌ಬಿಎಸ್‌ಕೆ ತಂಡಗಳಿಂದ ಮಕ್ಕಳ ಆರೋಗ್ಯ ತಪಾಸಣೆ: ಬಾಲಚಂದ್ರ ಖೋತ

ಆರ್‌ಬಿಎಸ್‌ಕೆ ತಂಡಗಳಿಂದ ಮಕ್ಕಳ ಆರೋಗ್ಯ ತಪಾಸಣೆ: ಬಾಲಚಂದ್ರ ಖೋತ

ಶೇಡಬಾಳ 24: ಆರೋಗ್ಯ ತಜ್ಞರು ಸಂಭಾವ್ಯ ಕೋವಿಡ 3 ನೇಯ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಅಂತಾ ಸೂಚನೆಗಳನ್ನು ನೀಡಿರುವ ಕಾರಣ ಸರ್ಕಾರದ ಆದೇಶದಂತೆ ಪ್ರತಿ ಗ್ರಾಮಗಳಲ್ಲಿ ಆರ್‌ಬಿಎಸ್‌ಕೆ ತಂಡಗಳು 0-18 ವರ್ಷ ದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯವನ್ನು ಕೈಗೊಂಡಿದ್ದು, ಅದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಅಥಣಿಯ ಆರ್‌ಬಿಎಸ್‌ಕೆ ತಂಡದ ನೇತ್ರಾಧಿಕಾರಿ ಬಾಲಚಂದ್ರ ಖೋತ ಕರೆ ನೀಡಿದರು. 

ಅವರು ಮಂಗಳವಾರ ದಿ. 24 ರಂದು ಉಗಾರ ಬುದ್ರುಕ ಗ್ರಾಮದ ಸರ್ಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ "ಆರೋಗ್ಯ ನಂದನ" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.  

ಈ ಆರೋಗ್ಯ ತಪಾಸಣೆಯಲ್ಲಿ 18 ವರ್ಷದ ಒಳಗಿನ ಎಲ್ಲ ಮಕ್ಕಳನ್ನು ಹಾಗೂ ಅಪೌಷ್ಠಿಕತೆ, ರಕ್ತಹೀನತೆ ಹೊಂದಿರುವ ಮಕ್ಕಳ ಆರೋಗ್ಯವನ್ನು ತಪಾಸಣೆ ಮಾಡಲಾಗುವುದು. ತಪಾಸಣೆ ಸಮಯದಲ್ಲಿ ಸಾಮಾನ್ಯ ನ್ಯೂನತೆ ಕಂಡು ಬಂದ ಮಕ್ಕಳಿಗೆ ಚಿಕಿತ್ಸೆ, ಸಲಹೆ ಸೂಚನೆ ನೀಡಲಾಗುವುದು. ತೀವ್ರತರಹದ ನ್ಯೂನತೆ ಕಂಡ ಬಂದ ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಾ ಹಾಗೂ ಜಿಲ್ಲಾ ಕೇಂದ್ರಗಳಿಗೆ ಹೋಗುವಂತೆ ಸೂಚಿಸಲಾಗುವುದೆಂದು ಹೇಳಿದರು.  

ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳನ್ನು ಕೋವಿಡ್ 3 ಅಲೆಯಿಂದ ರಕ್ಷಿಸಲು ಹೆಚ್ಚಿನ ಮುತುವರ್ಜಿ ವಹಿಸುವಂತೆ ಹೇಳಿದ ಅವರು  ಮುಖಕ್ಕೆ ಮಾಸ್ಕ್‌, ಮೇಲಿಂದ ಮೇಲೆ ಸೆನಿಟೈಜರನಿಂದ ಕೈ ತೊಳೆದುಕೊಳ್ಳುವುದು, ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಸಲಹೆ ನೀಡಿದರು. 

ಆರ್‌ಬಿಎಸ್‌ಕೆ ತಂಡದ ನೇತ್ರಾಧಿಕಾರಿ ಬಾಲಚಂದ್ರ ಖೋತ, ವೈದ್ಯರಾದ ಆನಂದ ಹಿರೇಮಠ, ಚನ್ನಪ್ಪ ಹೊಸಕೋಟೆ, ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯಾಧ್ಯಾಪಕಿ ಎ.ಬಿ.ಕಾಮತ, ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯಾಧ್ಯಾಪಕ ವ್ಹಿ.ಕೆ.ಪೂಜಾರಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಪಾಲಕರು, ಮಕ್ಕಳು, ಶಾಲೆಯ ಸಿಬ್ಬಂದಿವರ್ಗದವರು ಇದ್ದರು. 


ಸುದ್ದಿ ಓದಿ