ಕಾಗವಾಡದಲ್ಲಿ ವಿಜೃಂಭಣೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಲೋಕದರ್ಶನ ವರದಿ
ಶೇಡಬಾಳ 01: ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ಕಾಗವಾಡ ಪಟ್ಟಣದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾಗವಾಡ ತಾಲೂಕಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಮಾರುಕಟ್ಟೆ ಇಲಾಖೆ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘ, ಶಿವಾನಂದ ಮಹಾವಿದ್ಯಾಲಯ, ಮಲ್ಲಿಕಾರ್ಜುನ ವಿದ್ಯಾಲಯ, ಬಾಬಾಗೌಡ ಪಾಟೀಲ ಕಾನ್ವೆಂಟ ಶಾಲೆ, ಸರ್ಕಾರಿ ಕನ್ನಡ ಗಂಡು-ಹೆಣ್ಣು ಮಕ್ಕಳ ಶಾಲೆ, ಮರಾಠಿ ಶಾಲೆ, ಉರ್ದು ಶಾಲೆ, ಎಲ್ಲ ಸರ್ಕಾರಿ ಇಲಾಖೆಗಳ ಹಾಗೂ ಕನ್ನಡ ಅಭಿಮಾನಿ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಾಗವಾಡ ತಹಶೀಲ್ದಾರ ಕಾರ್ಯಾಲಯದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.
ಕಾಗವಾಡ ಶಾಸಕ ಹಾಗೂ ಮಾಜಿ ಸಚಿವ ಶ್ರೀಮಂತ ಪಾಟೀಲರು ಹಾಗೂ ತಾಲೂಕಾ ದಂಡಾಧಿಕಾರಿ ರಾಜೇಶ ಬುರ್ಲಿ ಅವರು ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಇಲ್ಲಿನ ಕಿತ್ತೂರ ರಾಣಿ ಚೆನ್ನಮ್ಮ ಸರ್ಕಲ್ನಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ತಾಯಿ ಭುವನೇಶ್ವರಿ ದೇವಿ, ವೀರ ರಾಣಿ ಕಿತ್ತೂರ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾ ಕರ್ನಾಟಕದಲ್ಲಿ ಹುಟ್ಟಿದವರೆಲ್ಲ ಕನ್ನಡಿಗರು. ಅವರು ಯಾವುದೇ ಜಾತಿ, ಮತ, ಪಂಥ ಭಾಷೆಯವರಾಗಿದ್ದರು ಕೂಡ ಕನ್ನಡ ಭಾಷೆಗೆ, ತಾಯಿ ಭುವನೇಶ್ವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಯ ತಾಯಿ ಭುವನೇಶ್ವರಿ ದೇವಿ ಸೇವೆಗೆ ನಾವೆಲ್ಲರೂ ಕಂಕಣ ಬದ್ಧರಾಗೋಣ ಎಂದು ಹೇಳಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.
ಅಂಬಾರಿ ಹೊತ್ತ ಆನೆಯ ಮೇಲೆ ಭುವನೇಶ್ವರಿ ದೇವಿಯ ಭಾವಚಿತ್ರ ಇರಿಸಿ ಮೆರವಣಿಗೆ ಮಾಡಲಾಯಿತು. ಕಿತ್ತೂರ ಚೆನ್ನಮ್ಮ ಸರ್ಕಲ್ನಿಂದ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಸರ್ಕಲಗೆ ಬಂದು ಮುಕ್ತಾಯಗೊಂಡಿತು. ಮೆರವಣಿಗೆಯುದ್ದಕ್ಕೂ ಕನ್ನಡ ಪರ ಗೀತೆಗಳಿಗೆ ಯುವಕರು ಕನ್ನಡಾಂಬೆಗೆ ಜೈಕಾರ ಹಾಕುತ್ತಾ ನರ್ತಿಸುತ್ತಾ ತಮ್ಮ ಅಭಿಮಾನವನ್ನು ಪ್ರದರ್ಶಿಸಿದರು. ಶಾಲಾ ವಿದ್ಯಾರ್ಥಿಗಳು ಅನೇಕ ವೇಷಭೂಷಣಗಳಲ್ಲಿ ಭಾಗವಹಿಸಿ ನೋಡುಗರ ಕಣ್ಮಣ ಸೆಳೆದರು.
ಉಪ ತಹಶೀಲ್ದಾರ ಅಣ್ಣಾಸಾಬ ಕೋರೆ, ಶಿರಸ್ತೆದಾರ ಎಂ.ಆರ್.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ, ಸಿಡಿಪಿಓ ಸಂಜೀವ ಸದಲಗಿ, ಸಿಪಿಆಯ್ ರವೀಂದ್ರ ನಾಯ್ಕೋಡೆ, ಪಪಂ ಮುಖ್ಯಾಧಿಕಾರಿ ರವೀಂದ್ರ ಸನಗೌಡರ, ತಾಲೂಕಾ ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್ಲ, ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ರಮೇಶ ಚೌಗಲೆ, ಕರ್ನಾಟಕ ರಕ್ಷಣಾ ವೇದಿಕೆಯ ಶಿವಾನಂದ ನವಿನ್ಯಾಳ, ಸಿದ್ದು ವಡೇಯರ, ಜಯ ಕರ್ನಾಟಕ ಬಸವರಾಜ ಮಗದುಮ, ಶಿವಾನಂದ ಮಹಾವಿದ್ಯಾಲಯದ ಪ್ರಾ. ವ್ಹಿ.ಎಸ್.ತುಗಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಎಲ್ಲ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಇದ್ದರು.
ಕಾಗವಾಡ ಪೋಲಿಸ ಇಲಾಖೆಯ ಸಿಬ್ಬಂದಿ ವರ್ಗ ಸೂಕ್ತ ಬಂದೊಬಸ್ತ ವ್ಯವಸ್ಥೆ ಕೈಗೊಂಡಿದ್ದರು.