ಕಾಗವಾಡ

ಶಿರಗುಪ್ಪಿಯಲ್ಲಿ ಕೆಎಲ್‌ಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ

ಶಿರಗುಪ್ಪಿಯಲ್ಲಿ ಕೆಎಲ್‌ಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ

ಶೇಡಬಾಳ 13:  ಸಪ್ತರ್ಷಿಗಳ ಹಾಗೂ 3 ಜನ ಪ್ರೇರಕರ ತ್ಯಾಗ ಹಾಗೂ ಪರಿಶ್ರಮದ ಫಲವಾಗಿ ಇಂದು ಕೆಎಲ್‌ಇ ಸಂಸ್ಥೆಯು ಹೆಮ್ಮರವಾಗಿ ಬೆಳೆದು ರಾಜ್ಯ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ  ಸರ್ವ ಜನಾಂಗದ ಸುಂದರ ತೋಟವಾಗಿ ಪರಿಣಮಿಸಿದೆ ಎಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಆನಂದಕುಮಾರ ಎಂ ಜಕ್ಕನ್ನವರ ಹೇಳಿದರು. 

ಅವರು ಶನಿವಾರ ದಿ. 13 ರಂದು ಸಮೀಪದ ಶಿರಗುಪ್ಪಿ ಗ್ರಾಮದಲ್ಲಿನ ಕೆಎಲ್‌ಇ ಸಂಸ್ಥೆಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕೆಎಲ್‌ಇ ಸಂಸ್ಥೆಯ 106 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಪೋಟೊ ಪೂಜೆ, ದೀಪ ಪ್ರಜ್ವಲನೆ ನೆರವೇರಿಸಿ ಮಾತನಾಡುತ್ತಿದ್ದರು. 

ಆಗೀನ ಮುಂಬೈ ಕರ್ನಾಟಕದಲ್ಲಿದ್ದ ಬೆಳಗಾವಿ, ವಿಜಯಪೂರ, ಧಾರವಾಡ ಜಿಲ್ಲೆಗಳು ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಹಿಂದುಳಿದ ಪ್ರದೇಶಗಳಾಗಿದ್ದವು. ಇದನ್ನು ಕಣ್ಣಾರೆ ಕಂಡ ಸಪ್ತರ್ಷಿಗಳ ತ್ಯಾಗ, ಪರಿಶ್ರಮ ನಿಸ್ವಾರ್ಥ ಸೇವೆಯ ಫಲವಾಗಿ ಇಂದು ಕೆಎಲ್‌ಇ ಸಂಸ್ಥೆಯು ಹೆಮ್ಮರವಾಗಿ ಬೆಳೆದು 265 ಅಂಗ ಸಂಸ್ಥೆಗಳು, 16 ಸಾವಿರ ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗ, 1 ಲಕ್ಷ 30 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದರು.  

ಶಿರಗುಪ್ಪಿ ಕೆಎಲ್‌ಇ ಸಂಸ್ಥೆಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾ.ಎಸ್‌.ಬಿ.ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡ ಸಮೃದ್ಧವಾಗಿರಲು ಸಪ್ತರ್ಷಿಗಳ ತ್ಯಾಗವೇ ಕಾರಣವಾಗಿದೆ. ಅವರ ಋಣ ನಮ್ಮ ನಿಮ್ಮೆಲ್ಲರ ಮೇಲಿದೆ. ಆ ಮಹನೀಯರನ್ನು ಸದಾ ಕಾಲ ಸ್ಮರಿಸುತ್ತಾ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಕನಸುಗಳನ್ನು ನನಸು ಮಾಡಿದವರು ಡಾ. ಪ್ರಭಾಕರಅಣ್ಣಾ ಕೋರೆಯವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೋರೆಯವರ ನೇತೃತ್ವದಲ್ಲಿ ಆಡಳಿತ ಮಂಡಳಿಯವರು ಸಮಾಜದ ಭಾವನೆಗಳಿಗೆ ಸ್ಪಂದಿಸುತ್ತಾ ಕೆಎಲ್‌ಇ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸಿದರು. 

ಕೆಎಲ್‌ಇ ಸಂಸ್ಥೆಯು 1916 ರಿಂದ 1963 ರವರೆಗೆ ಪ್ರಥಮ ಘಟ್ಟ, 1963 ರಿಂದ 1984 ರವರೆಗೆ ಎರಡನೇ ಘಟ್ಟದಲ್ಲಿ ಕಾರ್ಯನಿರ್ವಹಿಸುತ್ತಾ ಬದಲಾವಣೆಗೆ ಸ್ಪಂದಿಸುತ್ತಾ 1984 ರಿಂದ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರಅಣ್ಣಾ ಕೋರೆಯವರು ದೂರದರ್ಶತ್ವ ಸಮರ್ಥ ಕೌಶಲ್ಯ, ದಕ್ಷ ಆಡಳಿತದಿಂದ 3 ನೇ ಘಟ್ಟದಲ್ಲಿ ವಿಶ್ವ ವಿಖ್ಯಾತಿವನ್ನು ಪಡೆದುಕೊಂಡಿದೆ. ಡಾ. ಪ್ರಭಾಕರ ಕೋರೆಯವರ ನೇತೃತ್ವದಲ್ಲಿ ಜಗತ್ತಿನ ಭೂಪಟದಲ್ಲಿ ಕೆಎಲ್‌ಇ ಸಂಸ್ಥೆಯು ಮಿನುಗುತಾರೆಯಾಗಿ ಮಿನುಗುತ್ತಿದೆ ಪ್ರಾ.ಎಸ್‌.ಬಿ.ಪಾಟೀಲ ಎಂದು ಹೇಳಿದರು.  

ಇದೇ ಸಮಯದಲ್ಲಿ ಸಂಸ್ಥಾಪಕ ದಿನಾಚರಣೆ ಅಂಗವಾಗಿ ಮಹಾವಿದ್ಯಾಲಯದ ಆವರಣದಲ್ಲಿ 300 ವಿವಿಧ ತಳಿಯ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಿರಗುಪ್ಪಿ ಗ್ರಾಮ ಪಂಚಾಯತ ಅಧ್ಯಕ್ಷೆ ಗೀತಾಂಜಲಿ ಚೌಗಲೆ, ಪದ್ಮಣ್ಣ ಕುಂಬಾರ, ಕೆಎಸ್‌ಆರ್‌ಟಿಸಿ ಕಂಟ್ರೊಲರ್ ಬಿ.ಎಸ್‌.ಮೇಘನೂರ ಅವರನ್ನು ಮಹಾವಿದ್ಯಾಲಯದ ವತಿಯಿಂದ ಸತ್ಕರಿಸಲಾಯಿತು. 

ಈ ಸಮಯದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಆಯ್‌.ಎ.ಪಾಟೀಲ, ಆರ್‌.ಎಸ್‌. ಪಾಟೀಲ, ಆರ್‌.ಎಂ.ಪಾಟೀಲ, ಡಾ. ಆನಂದಕುಮಾರ ಎಂ ಜಕ್ಕನ್ನವರ, ಪ್ರಾ.ಎಸ್‌.ಬಿ.ಪಾಟೀಲ, ಶಿರಗುಪ್ಪಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೀತಾಂಜಲಿ ಚೌಗಲೆ, ಪದ್ಮಣ್ಣ ಕುಂಬಾರ, ಕೆಎಸ್‌ಆರ್‌ಟಿಸಿ ಕಂಟ್ರೊಲರ್ ಬಿ.ಎಸ್‌.ಮೇಘನೂರ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಇದ್ದರು.  

ಪ್ರೋ. ಆರ್‌.ಡಿ.ಪವಾರ ಸ್ವಾಗತಿಸಿದರು. ಪ್ರೋ ಪಿ.ಎಸ್‌.ವಂಟಮೂರೆ ವಂದಿಸಿದರು. ಆರ್‌.ಡಿ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. 


ಸುದ್ದಿ ಓದಿ