ಸೌಹಾರ್ದತೆಯಿಂದ ಮಹಮ್ಮದ್ ಪೈಗಂಬರ್ ಜಯಂತಿ ಆಚರಣೆ
ಹಿಂದೂ-ಮುಸ್ಲಿಂ ಬಾಂಧವರು ಸೇರಿ ಸಿಹಿ ಹಂಚಿ ಸಂಭ್ರಮ
ಕಾಗವಾಡ 16: ಪಟ್ಟಣದಲ್ಲಿ ಸೋಮವಾರ ದಿ. 16 ರಂದು ಹಿಂದೂ-ಮುಸ್ಲಿಂ ಬಾಂಧವರು ಸೇರಿ, ಪ್ರವಾದಿ ಮಹಮ್ಮದರ ಜಯಂತಿಯನ್ನು ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿ ಭಾವ್ಯಕ್ಯದ ಸಂದೇಶ ಸಾರಿದರು.
ಇಂದು ಬೆಳಿಗ್ಗೆಯೇ ಮುಸ್ಲಿಂ ಧರ್ಮಗುರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜಯಂತಿಯ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಜನತೆ ಪಟ್ಟಣದಲ್ಲಿ ಇಂದು ಶ್ರದ್ದಾ ಭಕ್ತಿಯಿಂದ ಆಚರಿಸಿದರು. ಬಳಿಕ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಸಿಹಿ ಹಂಚುವ ಕಾರ್ಯಕ್ರಮಕ್ಕೆ ಗ್ರಾಮದ ಗಣ್ಯರು ಚಾಲನೆ ನೀಡಿದರು.
ಮುಸ್ಲಿಂ ಬಾಂಧವರ ಬಕ್ರೀದ್, ರಂಜಾನ್ ಮೊದಲಾದ ಹಬ್ಬಗಳಲ್ಲಿ ಮಾಂಸಹಾರಕ್ಕೆ ಪ್ರಾಧಾನ್ಯತೆ ಇದ್ದರೇ ಈ ಹಬ್ಬದಲ್ಲಿ ಮಾತ್ರ ಸಿಹಿಗೆ ಪ್ರಧಾನ್ಯತೆ ಇರುವುದರಿಂದ ಪಟ್ಟಣದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಹಿಂದೂ-ಮುಸ್ಲಿಂ ಬಾಂಧವರು ಸೇರಿ, ಪೈಗಂಬರ ಜಯಂತಿ ಆಚರಿಸಿ, ಸಿಹಿ ಹಂಚಿ ಸಂಭ್ರಮಿಸಿರುವುದು ವಿಶೇಷವಾಗಿತ್ತು. ಈ ಸಮಯದಲ್ಲಿ ಅನೇಕ ಮುಖಂಡರು ಮಾತನಾಡಿ, ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದದಿಂದ ಬಾಳುತ್ತಿದ್ದು, ಎಲ್ಲ ಹಬ್ಬಗಳನ್ನು ಒಟ್ಟಾಗಿ ಆಚರಿಸುವ ಮೂಲಕ ಭ್ರಾತತ್ವದ ಸಂದೇಶ ಸಾರುವ ಜೊತೆಗೆ ಸಹಬಾಳ್ವೆಯಿಂದ ಬಾಳಿ ಮಹಮ್ಮದ ಪೈಗಂಬರ ಸಂದೇಶದಂತೆ ಬದುಕುತ್ತಿದ್ದೇವೆ ಎಂದರು.
ಮುಖಂಡರಾದ ಬಾಬು ಸೈಯದ, ಕಾಶೀಮ ಮುಲ್ಲಾ, ರಮೇಶ ಚೌಗುಲಾ, ಸೌರಭ ಪಾಟೀಲ, ಅರುಣ ಜೋಶಿ, ಅಸ್ಲಂ ಜಮಾದಾರ, ಪ್ರಕಾಶ ಮಿರ್ಜೆ, ಜಮೀಲ ಶೇಖ, ಸಲಿಮ್ ಕನವಾಡೆ, ಮಲಿಕ್ ಮಕಾನದಾರ, ಶಾಹಿದ ಮಿರ್ಜೆ, ಹಾಫೀಜ್ ಯುನುಸ್, ಖ್ವಾಜಾಸಾಬ ಮುಲ್ಲಾ, ಬಾಳು ಕೊರಬು, ಅಮರ ಶಿಂಧೆ, ಶಂಕರ ನಾಯಕ, ಅಮ್ಜದ ಮಕಾನದಾರ, ಜಾವಿದ ಅಲಾಸೆ ಸೇರಿದಂತೆ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು, ಅನೇಕ ಹಿಂದೂ-ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.