ಸಸಿಗೆ ನೀರುಣಿಸುವ ಮೂಲಕ ಪರಿಸರ ದಿನಾಚರಣೆ
ರಾಣೇಬೆನ್ನೂರು, 08: ಪರಿಸರ ಮತ್ತು ಮನುಷ್ಯ ಸಂಕುಲದ ನಡುವೆ ಅವಿನಾಭಾವ ಸಂಬಂಧವಿದ್ದು ಪರಿಸರ ರಕ್ಷಣೆಯ ಬಗ್ಗೆ ಮಕ್ಕಳಲ್ಲಿ ಸ್ಥಿತಪ್ರಜ್ಞೆ ಮೂಡಿಸಬೇಕಾಗಿದೆ ಎಂದು ಎಸ್ಎಸ್ಕೆ ಸಮಾಜದ ಅಧ್ಯಕ್ಷ ಕೃಷ್ಣಸಾ ಪವಾರ ಅಭಿಪ್ರಾಯ ಪಟ್ಟರು.
ನಗರದ ಅಂಬಾಭವಾನಿ ಶಾಲೆಯಲ್ಲಿ ಪರಿಸರ ದಿನಾಚರಣೆಯಲ್ಲಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿಯ ಸಮತೋಲನ ಕಾಪಾಡುವುದು ಪ್ರತಿಯೊಬ್ಬರ ಹೊಣೆಯಾಗಿದ್ದು ಜಾಗತಿಕ ತಾಪಮಾನದಿಂದ ಮನುಷ್ಯ ಸಂಕುಲದ ಅವನತಿಗೆ ಕಾರಣವಾಗುವದು ಆದ್ದರಿಂದ ಇಂದಿನ ಪೀಳಿಗೆಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಕಂಡುಕೊಳ್ಳುವಂತೆ ತಿಳುವಳಿಕೆ ಮೂಡಿಸಬೇಕೆಂದರು.
ಯುವ ಮುಖಂಡ ವೆಂಕಟೇಶ ಮಿಸ್ಕಿನ್ ಮಾತನಾಡಿ, ಮನುಷ್ಯನ ಹುಟ್ಟಿನಿಂದ ಆತನ ಕೊನೆ ಉಸಿರು ಇರುವವರೆಗೂ ಬದುಕಲು ಅವಶ್ಯವಿರುವ ಆಮ್ಲಜನಕ, ನೀರು ಸೇರಿದಂತೆ ಸಂಪನ್ಮೂಲವನ್ನು ಒದಗಿಸುತ್ತದೆ ಆದರೆ ಮನುಷ್ಯ ತನ್ನತನದ ಉಳುವಿಗೆ ಅರಣ್ಯನಾಶ ಮಾಡಿ ಕೈಗಾರೀಕರಣ, ನಗರೀಕರಣಕ್ಕೆ ಒತ್ತು ನೀಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದ್ದರಿಂದ ಪರಿಸರದ ರಕ್ಷಣೆಗೆ ಮುಂದಾಗಿ ಸುಂದರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಕಂಕಣಬದ್ಧರಾಗಬೇಕೆಂದು ಕರೆ ನೀಡಿದರು.
ಸಮಾಜದ ಮುಖಂಡರಾದ ಗೀರೀಶ ಮೆಹರವಾಡೆ, ಶಾಲೆಯ ದೈಹಿಕ ಶಿಕ್ಷಕ ಚಿಕ್ಕಪ್ಪ ಸೇರಿದಂತೆ ಶಾಲೆಯ ಸಿಬ್ಬಂಧಿ ವರ್ಗದವರಿದ್ದರು.