ಜೂನ್ ಒಳಗೆ ಕಾಲುವೇ ದುರಸ್ತಿ ಭರವಸೆ : ಸ್ಥಳಕ್ಕೆ ಬೇಟಿ ನೀಡಿದ ಅಭಿಯಂತರರಾದ ರಾಠೋಡ, ಕೆ. ರವಿ ರೈತರೊಂದಿಗೆ ಸಮಾಲೋಚನೆ
ಲೋಕದರ್ಶನ ವರದಿ
ಕಾಗವಾಡ 12: ತಾಲೂಕಿನ ಐನಾಪುರ ಏತ ನೀರಾವರಿ ಯೋಜನೆಯ ಮೂಲಕ ರೈತರಿಗೆ ನೀರೊದಗಿಸುವ ಮೇಲು ಸೇತುವೆ ಸೋರುತ್ತಿರುವುದನ್ನು ಪ್ರತಿಭಟಿಸಿ ಮಂಗಳವಾರದಂದು ಐನಾಪುರದ ಕರ್ನಾಟಕ ನೀರಾವರಿ ನಿಗಮದ ಕಚೇರಿಗೆ ರೈತರು ಬೀಗ ಹಾಕಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬುಧವಾರ ಅಧೀಕ್ಷಕ ಅಭಿಯಂತರ ಬಿ.ಆರ್. ರಾಠೋಡ ಇಂದು ಸ್ಥಳಕ್ಕೆ ಬೇಟಿ ನೀಡಿ ಪರೀಶೀಲಿಸಿದರು.
ಬುಧವಾರದಂದು ನೀರಾವರಿ ಕಚೇರಿಯಲ್ಲಿ ಅಧೀಕ್ಷಕ ಅಭಿಯಂತರ ಬಿ.ಆರ್. ರಾಠೋಡ, ಅಭಿಯಂತರ ಕೆ. ರವಿ ಅವರು ನೂರಾರು ರೈತರೊಂದಿಗೆ ಸಮಾಲೋಚನೆ ನಡೆಸಿದರು.
ರೈತರು ರೊಚ್ಚಿಗೆದ್ದು ಕಳೆದ 12 ವರ್ಷಗಳಿಂದ ಯೋಜನೆ ಪ್ರಾರಂಭವಾಗಿದ್ದು ಆಗಿನಿಂದ ಈವರಗೆ ಪ್ರತಿವರ್ಷ ಜೂನದಿಂದ ಅಕ್ಟೋಬರ ಕೊನೆಯವರೆಗೆ ಕಾಲುವೆ ಮೂಲಕ ನೀರು ಹರಿಸಿ ಕಾಗವಾಡ ತಾಲೂಕಿನ ಉತ್ತರ ಭಾಗದ ಸುಮಾರು 2 ಲಕ್ಷ ಎಕರೆ ಪ್ರದೇಶಕ್ಕೆ ನೀರು ಹರಿಸಲಾಗುತ್ತಿದೆ.
ಈ ಕಾಲುವೆಗಳು ಸಂಪೂರ್ಣ ಬಿರುಕು ಬಿಟ್ಟಿದ್ದು ಐನಾಪುರದ ಸುಮಾರು 5ಸಾವಿರ ಎಕರೆ ಕ್ಷೇತ್ರಗಳಲ್ಲಿ ನೀರು ಬಸಿದು ಬೆಳೆ ಬೆಳೆಯಲು ಬರುತ್ತಿಲ್ಲ. ಈಗ ಸುಮಾರು ಒಂದು ಲಕ್ಷ ಟನ್ ರಷ್ಟು ಬೆಳೆದ ಕಬ್ಬು ಭೂಮಿಯಲ್ಲಿದೆ, ನೀರು ನಿಂತಿರುವದರಿಂದ ಕಬ್ಬು ಕಟಾವು ಆಗುತ್ತಿಲ್ಲ. ಈ ಹಂಗಾಮು ಕೇವಲ ಒಂದೇ ತಿಂಗಳು ಉಳಿದಿದೆ. ಇದರಿಂದ ಕೋಟ್ಯಾಂತರ ರೂ. ಹಾನಿ ರೈತರಿಗೆ ಹಾನಿಯಾಗುತ್ತಿದೆ. ಇದನ್ನು ಸರಕಾರ ಭರಿಸಬೇಕು ಎಂದು ರೈತ ಮುಖಂಡ ಅರುಣ ಗಾಣಿಗೇರ ಆಗ್ರಹಿಸಿದರು.
ರೈತ ಮುಖಂಡರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಕುಮಾರ ಅಪರಾಜ, ಸಂಜಯ ಭೀರಡಿ,ಅರವಿಂದ ಕಾರ್ಚಿ ಆದಿನಾಥ ದಾನೊಳ್ಳಿ, ಸುರೇಶ ಗಾಣಿಗೇರ, ಹಣಮಂತ ಗುರವ,ಅನೀಲ ಸಾವಳಿ, ಸುಭಾಷ ಪಾಟೀಲ, ನರಸು ಕೋರ್ಬು, ರಾಜು ವಡಿಯರ, ಬಾಹುಬಲಿ ಮಲ್ಲೇವಾಡಿ, ಸುನೀಲ ಪಾಟೀಲ, ಹರ್ಷವರ್ದನ ಪಾಟೀಲ ಸತೀಶ ಗಾಣಿಗೇರ, ಮೋಹನ ಮುತಾಲಿತ ಮುಂತಾದ ರೈತರು ಅಧಿಕಾರಿಗಳೊಂದಿಗೆ ವಾದ ವಿವಾದಕ್ಕಿಳಿದು ಕಳೆದ 10 ವರ್ಷಗಳಿಂದ ಇದೇ ಆಶ್ವಾಸನೆ ನೀಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಆರ್.ರಾಠೋಡ ಯಾವುದೇ ಕಾಲಕ್ಕೆ ಬರುವ ಜೂನ್ ಒಳಗೆ ಕಾಲುವೇ ದುರಸ್ತಿಗೊಳಿಸಿ ಯೋಜನೆ ಪ್ರಾರಂಭಿಸುತ್ತೇವೆ. ನಿರ್ದಿಷ್ಟ ಸಮಯದಲ್ಲಿ ದುರಸ್ತಿಗೊಳ್ಳದಿದ್ದರೆ ಯೋಜನೆ ಬಂದ್ ಇಡುತ್ತೇವೆ ಎಂದರು.
ಅಧಿಕಾರಿಗಳಾದ ಪ್ರವೀಣ ಹುಣಸಿಕಟ್ಟಿ, ಪ್ರಶಾಂತ ಪೋತದಾರ ಸೇರಿದಂತೆ ಅನೇಕರು ಇದ್ದರು.