ರೈತರ ವಿದ್ಯುತ್ ಪಂಪಸೆಟ್ಗಳ ಕೇಬಲ ಕಳ್ಳತನ : ಎರಡು ತಿಂಗಳಲ್ಲಿ ಎರಡು ಬಾರಿ ಘಟನೆ : ಕಳ್ಳರ ಬಂಧನಕ್ಕೆ ಒತ್ತಾಯ
ಲೋಕದರ್ಶನ ವರದಿ
ಕಾಗವಾಡ 07: ಕಳೆದ ತಿಂಗಳವಷ್ಟೇ 30 ಜನ ರೈತರ ವಿದ್ಯುತ್ ಪಂಪಸೆಟ್ಗಳ ಸುಮಾರು 10 ಲಕ್ಷ ರೂ. ಮೌಲ್ಯದ ಕೆಬಲ್ ಕಳ್ಳತನವಾಗಿತ್ತು. ಈಗ ಮತ್ತೇ ರವಿವಾರ ರಾತ್ರಿ 26 ರೈತರ ಪಂಪಸೆಟ್ಗಳ ಕೇಬಲ ಕಳ್ಳತನವಾದ ಘಟನೆ ಉಗಾರ ಬುದ್ರುಕ ಗ್ರಾಮದಲ್ಲಿ ನಡೆದಿದೆ.
ರವಿವಾರ ರಾತ್ರಿ ಕೃಷ್ಣಾ ನದಿ ತೀರದಲ್ಲಿ ಅಳವಡಿಸಿರುವ ಪಂಪಸೆಟ್ಗಳ ಸುಮಾರು 5 ಲಕ್ಷ ರೂ ಮೌಲ್ಯದ ಕೇಬಲ ಕತ್ತರಿಸಿ ನದಿ ದಡದಮೇಲೆ ಕೇಬಲಗಳಿಗೆ ಬೆಂಕಿ ಹಚ್ಚಿ ಸುಟ್ಟು ಅದರಲ್ಲಿಯ ತಾಂಬ್ರದ ತಂತಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಬೆಳಗ್ಗೆ ರೈತರು ಎಂದಿನಂತೆ ಪಂಪಸೆಟ್ ಪ್ರಾರಂಭಿಸಲು ಹೋದಾಗ ಕೇಬಲ್ ಕಳ್ಳತನವಾದ ಮಾಹಿತಿ ಲಭ್ಯವಾಗಿದೆ. ಗ್ರಾಮದ ಮುಖಂಡ ಶೀತಲಗೌಡ ಪಾಟೀಲ ಇವರಿಗೆ ರೈತರು ಮಾಹಿತಿ ನೀಡಿದ ಬಳಿಕ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದಾಗ ಕಳ್ಳರನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.
ಬೇಸಿಗೆಯ ಕಾಲ ಪ್ರಾರಂಭವಾಗಿದೆ ಎರಡು ತಿಂಗಳುಗಳಲ್ಲಿ ಎರಡು ಬಾರಿ ಕೇಬಲ್ ಕಳ್ಳತನವಾಗಿರುವದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದರು. ಇಲ್ಲಿಯ ರೈತರು ತಮ್ಮ ಬೆಳೆಗಳಿಗೆ ನೀರುನಿಸಲು ಮೋಟಾರುಗಳಿಗೆ ಅಳವಡಿಸಿರುವ ಕೇಬಲ ಕಳ್ಳತನವಾಗಿರುವದರಿಂದ ರೈತರು ಕಂಗಾಲಾಗಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಕಳ್ಳರನ್ನು ಬಂಧಿಸಲು ಪ್ರಯತ್ನಿಸಬೆಕೆಂದು ಆಗ್ರಹಿಸಿದರು.
ಈಗಾಗಲೇ ಐನಾಪುರ, ಮೋಳೆ, ಕೆಂಪವಾಡ, ಮದಬಾವಿ, ಕೃಷ್ಣಾ-ಕಿತ್ತೂರ ಕಾಗವಾಡ, ಶೇಡಬಾಳ, ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆದು ಲಕ್ಷಾಂತರ ಮೌಲ್ಯದ ಚಿನದನಾಭರಣ, ನಗದು ಹಣ, ಕಳ್ಳತನವಾಗಿದೆ. ಈಗ ಕೇಬಲ್ ಕಳ್ಳತನ ಮಾಡುತ್ತಿದ್ದಾರೆ, ಶೀಘ್ರವೇ ಕಳ್ಳರನ್ನು ಬಂಧಿಸದೇ ಹೋದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಕಳ್ಳತನವಾದ ರೈತರು ಪ್ರಶಾಂತ ವಸವಾಡೆ, ಕಲ್ಯಾಣಿ ತೆರದಾಳೆ, ರಾಹುಲ ಬೋಸಲೆ, ಆದಿನಾಥ ವಸವಾಡೆ, ಪದ್ಮಕುಮಾರ ಆಳಪ್ಪನವರ, ಅಭಿಷೇಕ ಚೌಗುಲೆ, ಬಾಳು ಹವಲೆ, ರಾಜು ವಸವಾಡೆ, ಸುಬಾಷ ಹೆಬ್ಬಾಳೆ, ಬಾಪುಗೌಡ ಪಾಯಪರ್ಪ, ಮುಂತಾದ ರೈತರ ಕೇಬಲ ಕಳ್ಳತನವಾಗಿದೆ.
ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರಿಗೆ ಸ್ಥಳೀಯ ರೈತರು ಕಳ್ಳತನದ ಘಟನೆಯ ಬಗ್ಗೆ ಹಲವಾರು ಬಾರಿ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ತಂಡಗಳನ್ನು ರಚನೆ ಮಾಡಿ ಕಳ್ಳರನ್ನು ಬಂಧಿಸುವಂತೆ ಸೂಚನೆ ನೀಡಿದ್ದು, ಕೂಡ ಕಳೆದ 4 ತಿಂಗಳುಗಳಲ್ಲಿ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ವಿಫಲರಾಗಿದ್ದಾರೆ ಎಂದು ರೈತರು ತಮ್ಮ ಅಳಲು ತೋಡಿಕೊಂಡರು.