ಧರ್ಮದಿಂದ ವ್ಯಾಪಾರ ಮಾಡಿದಾಗ ಅಭಿವೃದ್ಧಿ ಹೊಂದಲು ಸಾಧ್ಯ: ಅಮರೇಶ್ವರ ಮಹಾರಾಜರು
ಶೇಡಬಾಳ 30: ಇಂದಿನ ಯುವಕರು ಕಾಯಕವೇ ಕೈಲಾಸವೆಂದು ತಿಳಿದು, ಶ್ರದ್ಧಾ ಭಕ್ತಿಯಿಂದ ಉದ್ಯೋಗ ಮಾಡುತ್ತ ಗ್ರಾಹಕರೇ ದೇವರೆಂದು ತಿಳಿದು, ಪೂಜೆ ಮಾಡಿದಾಗ ಭಾಗ್ಯಲಕ್ಷ್ಮೀ ತಾನಾಗಿಯೇ ನಿಮ್ಮ ಮನೆಯಲ್ಲಿ ವಾಸವಾಗುತ್ತಾಳೆಂದು ಕವಲಗುಡ್ಡ-ಹಣಮಾಪೂರದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಅವರು ಶನಿವಾರ ದಿ. 30ರಂದು ಕಾಗವಾಡ ಪಟ್ಟಣದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿನ ಹ್ಯಾಪಿ ಶಾಪಿ ವಾಣಿಜ್ಯ ಮಳಿಗೆಯ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು.
ಧರ್ಮದಿಂದ ವ್ಯಾಪಾರ ಮಾಡಿದಾಗ ಅಭಿವೃದ್ಧಿ ಹೊಂದಲು ಸಾಧ್ಯ. ವರ್ಷವಿಡಿ ನಾವು ಎಷ್ಟು ಹಣ ಗಳಿಸಿದ್ದೇವೆ ಎನ್ನುವುದಕ್ಕಿಂತ ಎಷ್ಟು ಜನ ಸಾರ್ವಜನಿಕರು ನಮ್ಮ ಸೇವೆಯ ಲಾಭ ಪಡೆದುಕೊಂಡರು ಎಂಬುದು ಮುಖ್ಯವಾಗಿರಲಿ ಎಂದು ಹೇಳಿದರು.
ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಶ್ರೀಗಳು ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದ ವಾಣಿಜ್ಯ ಮಳಿಗೆ ಪ್ರಾರಂಭವಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದರ ಲಾಭವನ್ನು ಗ್ರಾಮಸ್ಥರು ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಂಚಾಲಕ ರಾಜುಗೌಡಾ ಪಾಟೀಲ ಮಾತನಾಡಿ, ಸಾರ್ವಜನಿಕರಿಗೆ ಯೋಗ್ಯ ಬೆಲೆಯಲ್ಲಿ ಗುಣಮಟ್ಟದ ವಸ್ತುಗಳನ್ನು ನೀಡುವುದೇ ನಮ್ಮ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಗದೀಶ ಪಾಟೀಲ, ಪಂಕಜ ಪಾಟೀಲ, ಹಾರ್ದಿಕ ಪಾಟೀಲ, ಸುಭಾಷ ಕಠಾರೆ, ಕಿರಣ ಗುಮಟೆ, ಜ್ಯೋತಿಕುಮಾರ ಪಾಟೀಲ ಆಗಮಿಸಿದ್ದರು.
ಶಶಿಕಾಂತ ಗುಮಟೆ, ಬಾಳಾಸಾಬ ಕಲ್ಲೋಳೆ, ಎಸ್.ಕೆ. ಆಳಗುಂದೆ, ಕಾಕಾಸಾಬ ಪಾಟೀಲ ಸೇರಿದಂತೆ ಗ್ರಾಮದ ಮುಖಂಡರು, ಸಂಸ್ಥೆಯ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು.