ಪ್ರವಾಹ ಕಾರ್ಯಾಚರಣೆಗೆ ನೀಲನಕ್ಷೆ ರೂಪಿಸಲಾಗಿದೆ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ 19: ಜಿಲ್ಲೆಯ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳನ್ನು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ವಾಡಿಕೆಯ ಮಳೆ ಆಗಿದೆ. ಬರುವ ಆಗಸ್ಟ್ ಮತ್ತು ಸೆಪ್ಟೆಂಬರ ತಿಂಗಳುಗಳಲ್ಲಿ ವ್ಯಾಪಕವಾಗಿ ವಾಡಿಕೆಗಿಂತ ಹೆಚ್ವು ಮಳೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಯಾವುದೇ ಜನ, ಜಾನುವಾರು ಹಾನಿ ಆಗದಂತೆ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವು ಅಗತ್ಯ ರಕ್ಷಣಾ ಸಾಮಗ್ರಿ, ತಂಡಗಳನ್ನು ಹೊಂದಿ, ಸಮರ್ಕ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪ್ರವಾಹದ ಮುನ್ನೆಚ್ಚರಿಕೆಯ ಕುರಿತು ಕೆಲಗೇರಿ ಕೆರೆಯಲ್ಲಿ ಆಯೋಜಿಸಿದ್ದ ಅಣುಕು ಪ್ರದರ್ಶನವನ್ನು ಶಾಲಾ ಮಕ್ಕಳು, ಸಾರ್ವಜನಿಕರೊಂದಿಗೆ ವೀಕ್ಷಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಅಣುಕು ಪ್ರದರ್ಶನದ ಉದ್ದೇಶ ಜಿಲ್ಲೆಯಲ್ಲಿ ಕುಂದಗೋಳ, ಹುಬ್ಬಳ್ಳಿ, ಅಣ್ಣಿಗೇರಿ, ನವಲಗುಂದ ಧಾರವಾಡ ತಾಲೂಕಿನಲ್ಲಿ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳಗಳು ದೊಡ್ಡ ಪ್ರಮಾಣದ ಹಳ್ಳಗಳಾಗಿದ್ದು, ಸದರಿ ಹಳ್ಳಗಳು ಮಳೆಗಾಲದಲ್ಲಿ ಅಚ್ಚು-ಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಜಿಲ್ಲೆಯ ಸುಮಾರು 56 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರವಾಹ ಪೀಡಿತ ಗ್ರಾಮಗಳಲ್ಲಿ ರಕ್ಷಣಾ ಸಾಮಾಗ್ರಿಗಳನ್ನು ಸುಸ್ಥಿತಿಯಲ್ಲಿ ಇರುವ ಕುರಿತು ಪರೀಶೀಲಿಸಿ, ಸಿದ್ಧತೆಯಲ್ಲಿಟ್ಟುಕೊಳ್ಳುವದಕ್ಕಾಗಿ ಹಾಗೂ ಪ್ರವಾಹದ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಅಣುಕು ಪ್ರದರ್ಶನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಪ್ರವಾಹ ಪೀಡಿತಕ್ಕೆ ಒಳಗಾಗಬಹುದಾದ ಪ್ರದೇಶಗಳು ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳಗಳಿಂದ 5 ತಾಲೂಕುಗಳಲ್ಲಿನ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯ 56 ಗ್ರಾಮಗಳು ಪ್ರವಾಹ ಪೀಡಿತವಾಗಬಹುದು ಮತ್ತು ಈ 56 ಗ್ರಾಮಗಳ 8,677 ಜನರು ಇರುವ 1,824 ಕುಟುಂಬಗಳು, 3,188 ಜಾನುವಾರುಗಳು ಹಾಗೂ 85,514 ಎಕರೆ ಕೃಷಿ ಜಮೀನು ಪ್ರವಾಹಕ್ಕೆ ಒಳಗಾಗಬಹುದೆಂದು ಸಮೀಕ್ಷೆ ಮೂಲಕ ಅಂದಾಜಿಸಲಾಗಿದೆ. ಆದುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯಕ್ಕೆ ತಕ್ಕಂತೆ 71 ಕಾಳಜಿ ಕೇಂದ್ರಗಳು ಹಾಗೂ ಆರು ಗೋಶಾಲೆಗಳನ್ನು ತೆರೆಯಲು ಸ್ಥಳ ಗುರುತಿಸಿ, ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಜನ, ಜಾನುವಾರು ಹಾನಿ ಹುಬ್ಬಳ್ಳಿ ನಗರ ತಾಲ್ಲೂಕಿನ ತಾರಿಹಾಳ ಗ್ರಾಮದ ನಿವಾಸಿ ಒಬ್ಬರು ಮೇ ತಿಂಗಳಿನಲ್ಲಿ ಸಿಡಿಲು ಬಡಿತದಿಂದ ಮೃತಪಟ್ಟಿದ್ದು, ವಾರಸುದಾರರಿಗೆ ರೂ.5 ಲಕ್ಷ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಮುಂಗಾರು ಅವಧಿಯಲ್ಲಿ ತಹಶೀಲ್ದಾರರ ಪ್ರಾಥಮಿಕ ವರದಿಯಂತೆ ಅಂದಾಜು 4 ಮನೆಗಳು ತೀವ್ರ ಹಾನಿ ಮತ್ತು 93 ಮನೆಗಳು ಭಾಗಶಃ ಹಾನಿ ಸೇರಿ ಒಟ್ಟು 97 ಮನೆಗಳು ಹಾನಿಯಾಗಿದ್ದು, ಹಾನಿಗೆ ಒಳಗಾದ ಮನೆಗಳ ಜಂಟಿ ಸಮೀಕ್ಷೆಯು ಪ್ರಗತಿ ಹಂತದಲ್ಲಿದೆ. ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಮಾರ್ಗಸೂಚಿಯಂತೆ ನಿಯಮಾನುಸಾರ ಸಂತ್ರಸ್ಥರಿಗೆ ಪರಿಹಾರ ಪಾವತಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾಡಳಿತದಿಂದ ಸಿದ್ಧತೆಗಳು ಜಿಲ್ಲಾಡಳಿತದಿಂದ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಸುತ್ತ-ಮುತ್ತಲಿನ ಪ್ರದೇಶದ ಪ್ರಸ್ತುತ ಹಾಗೂ ಮುಂದಿನ ಒಂದು ವಾರ ಸಂಭವಿಸಬಹುದಾದ ಮಳೆ ಪ್ರಮಾಣದ ವಿವರಗಳನ್ನು ರಾಜ್ಯ ಹವಾಮಾನ ಇಲಾಖೆಯಿಂದ ಪಡೆದುಕೊಂಡು ತಾಲ್ಲೂಕಿನ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆಯನ್ನು ಪ್ರತಿ ದಿನ ನೀಡಲಾಗುತ್ತಿದೆ. ಮತ್ತು ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ದಡದಲ್ಲಿರುವ ಗ್ರಾಮಗಳಲ್ಲಿ ಪ್ರವಾಹದ ಕುರಿತು ಡಂಗುರ ಸಾರುವುದು ಹಾಗೂ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರವಾಹದ ಕುರಿತು ಮುನ್ನೆಚ್ಚರಿಕೆಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳಗಳ ಪ್ರವಾಹಕ್ಕೆ ಒಳಪಡುವ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಪ್ರವಾಹ ಕುರಿತು ಮುನ್ನೆಚ್ಚರಿಕೆ ಅನುಸರಿಸುವಂತೆ ತಿಳಿಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯನ್ನು ಆಯೋಜಿಸಿ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರವಾಹ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ಜಿಲ್ಲಾಡಳಿತದಿಂದ ನೀಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 38 ಪರಿಣಿತ ಈಜುಗಾರರನ್ನು ಗುರುತಿಸಲಾಗಿದ್ದು, ಪ್ರವಾಹ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಈಜುಗಾರರ ಸಹಾಯವನ್ನು ಪಡೆದುಕೊಳ್ಳಲಾಗುವುದು. ತಾಲ್ಲೂಕಿನಲ್ಲಿ ಪ್ರವಾಹಕ್ಕೆ ಒಳಗಾಗುವ ಗ್ರಾಮದಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಕ್ಷಣಾ ಉಪಕರಣಗಳು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ರಕ್ಷಣಾ ತಂಡಗಳು ಮತ್ತು 2 ಬೋಟ್, 50-ಲೈಫ್ ಜಾಕೇಟ್, 60-ಲೈಫ್ ಬಾಯ್, 150- ರೇನ್ ಕೋಟ್ಗಳ ಸೇರಿದಂತೆ ಅಗತ್ಯವಿರುವ ವಿವಿಧ ರಕ್ಷಣಾ ಸಾಮಾಗ್ರಿಗಳನ್ನು ಸಿದ್ಧತೆಯಲ್ಲಿಟ್ಟುಕೊಂಡಿದ್ದು, ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಾಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾಡಳಿತದಿಂದ ಗ್ರಾಮವಾರು ಗುರುತಿಸಿರುವ ಈಜುಗಾರರ ಪೈಕಿ, ಶಂಕರಗೌಡ ಹನಮಂತಗೌಡ ರಾಚನಗೌಡ್ರ (9353019839), ಗುರನಗೌಡ ಸಂಗನಗೌಡ ಶಿವನಗೌಡ್ರ (7022333515), ಪ್ರಜ್ವಲ ಮಲ್ಲಿಕಾರ್ಜುನ ಕೆಂಗಾನಿಲಾರ (6362034986), ಭೀಮಪ್ಪ ಬಸಪ್ಪ ತುರಮರಿ (9019061957), ಮಂಜುನಾಥ ಅರ್ಜುನ ಕರಿಕಟ್ಟಿ (8792733064) ಹಾಗೂ ಕಲ್ಲಪ್ಪ ಗೂಳಪ್ಪ ವಗೆಣ್ಣವಿರ(9632859884) ಅವರು ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಅಣುಕು ಪ್ರದರ್ಶನ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಪ್ರಕಾಶ ಪವಾರ, ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ, ಪಾಲಿಕೆ ಸದಸ್ಯೆ ಚಂದ್ರಕಲಾ ಕೊಟಬಾಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ರಾಮಕೃಷ್ಣ ಸದಲಗಿ, ಕೆಲಗೇರಿ ಕಲ್ಮೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಗೌಡ ಪಾಟೀಲ, ಅಗ್ನಿಶಾಮಕ ಸಿಬ್ಬಂದಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು, ಆರೋಗ್ಯ ಇಲಾಖೆಯ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಎನ್ಸಿಸಿ ವಿದ್ಯಾರ್ಥಿಗಳು, ಸಿಬ್ಬಂದಿಗಳು, ವಿವಿಧ ಗ್ರಾಮಗಳ ನುರಿತ ಈಜುಗಾರರು, ಕಂದಾಯ ನೀರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಭಾಗವಹಿಸಿದ್ದರು.