ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಕಡ್ಡಾಯ:ಶಾಸಕ ಕೃಷ್ಣನಾಯ್ಕ
ಲೋಕದರ್ಶನ ವರದಿ
ಹೂವಿನಹಡಗಲಿ.ಜೂ.04-ಸರ್ಕಾರಿ ಕಚೇರಿಗಳು,ಆಸ್ಪತ್ರೆ ಮತ್ತು ಶಾಲಾಕಾಲೇಜುಗಳಲ್ಲಿ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು ಜತೆಗೆ ಕಚೇರಿಯಲ್ಲಿ ಇದ್ದು ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ತಾಲೂಕು ಪಂಚಾಯ್ತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶನಿವಾರ 11ಗಂಟೆಗೆ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಅಧಿಕಾರಿಗಳು ಶಿಸ್ತು ಮುಖ್ಯ,ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದ ಅವರು ಇಲ್ಲಿನ ರೈತರು ಶೇಂಗಾ ಮಾರಾಟಕ್ಕೆ ಮುಂಡರಗಿ ಹೋಗುತ್ತಾರೆ ಇಲ್ಲಿನ ಎಪಿಎಂಸಿ ಸೇರಿದಂತೆ ನಾನಾ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ರೈತರಿಗೆ ಸೌಲಭ್ಯಗಳನ್ನು ನೀಡಬೇಕು ಜತೆಗೆ ರೈತರು ಬೆಳೆದ ಬೆಳೆೆಗಳನ್ನು ಎಪಿಎಂಸಿ ಯಲ್ಲಿ ಖರೀದಿಗೆ ಅವಕಾಶವನ್ನು ಕಲ್ಪಿಸಬೇಕು ಎಂದರು.
ದೆಹಲಿ ಮಾದರಿಯಲ್ಲಿ ತಾಲೂಕಿನ 5 ಶಾಲೆಗಳನ್ನು ಮಾದರಿಯಲ್ಲಿ ಪ್ರಾಯೋಗಿಕವಾಗಿ ಅಭಿವೃದ್ಧಿ ಪಡಿಸುವ ಚಿಂತನೆ ಇದ್ದು ಎಲ್ಲ ರೀತಿಯ ಮೂಲಭೂತ ಸೌಲಭ್ಯ, ಹಸಿರೀಕರಣ, ಗುಣಾತ್ಮಕ ಶಿಕ್ಷಣ ತಂತ್ರಜ್ಞಾನ ಆಧಾರಿತ ವಾತಾವರಣ ಕಲ್ಪಿಸಿದರೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದರು. ತಾಲೂಕಿನಲ್ಲಿ 7ಶಾಲೆಗಳಲ್ಲಿ ಆಂಗ್ಲಮಾಧ್ಯಮ ತೆರೆದಿದ್ದರೂ ಇಂಗ್ಲೀಷ ಶಿಕ್ಷಕರಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್.ಹಳ್ಳಿ ಗುಡಿ ಹೇಳಿದರು.
ತಾಲೂಕಿನಲ್ಲಿ ಜಾನುವಾರುಗಳು,ಕುರಿ ಮೇಕೆಗಳನ್ನು ಮೇಯಿಸಲು ಅಗತ್ಯ ಪ್ರಮಾಣದಲ್ಲಿ ಗೋಮಾಳ ಭೂಮಿ ಇಲ್ಲ.ಜಾನುವಾರು ಸಂಖ್ಯೆ ಆಧರಿಸಿ ಎಷ್ಟು ಗೋಮಾಳ ಬೇಕು ಎಂಬ ಪ್ರಸ್ತಾಪ ಸಲ್ಲಿಸಿ ಎಂದು ತಹಶೀಲ್ದಾರ ಕೆ.ಶರಣಮ್ಮ ಅವರು ಪಶುವೈದ್ಯರಿಗೆ ಸೂಚಿಸಿದರು. ಪಂಚಾಯತ್ ರಾಜ್ ಎಂಜಿನಿಯರಿಂಗ್,ಲೋಕೋಪಯೋಗಿ, ಬಿಸಿಎಂ,ಸಮಾಜ ಕಲ್ಯಾಣ ಮತ್ತು ಆರೋಗ್ಯ ಇಲಾಖೆಗಳಿಗೆ ಕಳೆದ 5ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ,ಅನುಷ್ಠಾನಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಭೆಯಲ್ಲಿ ತಾ.ಪಂ.ಆಡಳಿತಾಧಿಕಾರಿ ಅಶೋಕ, ಕಾರ್ಯನಿರ್ವಾಹಕಾಧಿಕಾರಿ ಎಸ್.ಎಸ್.ಪ್ರಕಾಶ ಇದ್ದರು.
ಮೊದಲ ಬಾರಿಗೆ ಶಾಸಕ ಕೃಷ್ಣನಾಯ್ಕ ಇಲ್ಲಿನ ತಾಲೂಕು ಪಂಚಾಯ್ತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶನಿವಾರ ಬೆ.11ಗಂಟೆಗೆ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ತೆಗೆದುಕೊಂಡು ಸಂಜೆ 6ಗಂಟೆಯವರೆಗೂ ಸಭೆ ನಡೆಸಿ ಅಧಿಕಾರಿಗಳಿಗೆ ಚಳಿಜ್ವರ ಬಿಡಿಸಿದರು. ರಾಜಕಾರಣ ಬಿಟ್ಟು, ಶಾಲಾ-ಕಾಲೇಜು ಮತ್ತು ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಇದ್ದು, ಜನರ ಉತ್ತಮ ಸೇವೆ ಮಾಡಬೇಕು ಜತೆಗೆ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕೆಂದು ಎಚ್ಚರಿಕೆ ನೀಡಿದರು.ಜತೆಗೆ ಶಾಲೆಗಳಲ್ಲಿ ಉತ್ತಮ ಪರಿಸರ ಮತ್ತು ಶೌಚಾಲಯಗಳ ಸ್ವಚ್ಚತೆ ಜತೆಗೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟವನ್ನು ಕಲ್ಪಿಸಬೇಕು ಲೋಪ ಕಂಡ ಬಂದರೆ ಬಿಇಒ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಸೂಚಿಸಿದರು.