ಕಾಗವಾಡ

ಡಾ. ಪ್ರಕಾಶ ಕೇರೂರೆಗೆ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ

ಡಾ. ಪ್ರಕಾಶ ಕೇರೂರೆಗೆ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ

ಶೇಡಬಾಳ 03: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಪುತ್ರನಾದ ಡಾ. ಪ್ರಕಾಶ ಕೇರೂರೆಗೆ ಕೃಷಿ ವಿಜ್ಞಾನ ವಿಭಾಗದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ 2021-22 ನೇ ಸಾಲಿನ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ ಲಭಿಸಿದೆ.  

ಡಾ. ಪ್ರಕಾಶ ಕೆರೂರೆಯವರು ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ. ಇತ್ತೀಚಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿ ಆವರಣದಲ್ಲಿ ನಡೆದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ದಶಮಾನೋತ್ಸವ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅನಂತಪೂರದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಜಿ, ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ವಿಧಾನಸಭಾ ಸದಸ್ಯ ಎಚ್‌.ಹಾಲಪ್ಪ, ಶಿವಮೊಗ್ಗ ಗೌರವಾನ್ವಿತ ಕುಲಪತಿ ಡಾ. ಆರ್‌.ಸಿ. ಜಗದೀಶ ಮತ್ತು ಇನ್ನಿತರ ಗಣ್ಯಮಾನ್ಯರು ಡಾ. ಪ್ರಕಾಶ ಕೇರೂರೆಗೆ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದರು.  

ಡಾ. ಪ್ರಕಾಶ ಕೆರೂರೆ ಅವರು ಶೇಡಬಾಳದ ನಾಗಪ್ಪ ಹಾಗೂ ಗಂಗವ್ವ ಕೆರೂರೆ ಅವರ ಪುತ್ರ. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಶೇಡಬಾಳ ಪಟ್ಟಣದ ಮಹಾದೇವ ಬಳವಂತ ಭಂಡಾರೆ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 10 ವರ್ಗದವರೆಗೆ ಬೆಳಗಾವಿಯ ರಾಜಾಲಖಮಗೌಡ ವಿಜ್ಞಾನ ಕಾಲೇಜನಲ್ಲಿ ಪಿಯುಸಿ ವ್ಯಾಸಂಗ ಮುಗಿಸಿ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಅರಭಾಂವಿ ಗೋಕಾಕ ತೋಟಗಾರಿಕೆಯಲ್ಲಿ ಬಿಎಸ್ಸಿ ಪದವಿ ಮುಗಿಸಿ 7 ಬಂಗಾರದ ಪದಕಗಳನ್ನು ಪಡೆದುಕೊಂಡಿದ್ದರು.   ಬೆಂಗಳೂರಿನ ಜಿಕೆವಿಕೆಯಲ್ಲಿ ಎಂಎಸ್ಸಿ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೇ ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಪಿಎಚ್‌ಡಿ ಪದವಿ ಪಡೆದು, 2011ರಲ್ಲಿ ಬೆಂಗಳೂರು ಕೃಷಿ ವಿಸ್ತರಣಾ ನಿರ್ದೇಶನಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ವಿಷಯ ತಜ್ಞರಾಗಿ ಸೇವೆ ಆರಂಭಿಸಿದರು. 

ಇವರು ತೋಟಗಾರಿಕೆಯಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಆಗೀನ ರಾಷ್ಟ್ರಪತಿ ಪ್ರತಿಭಾ ಪಾಟೀಲರಿಂದ ರಾಷ್ಟ್ರಪತಿ ಪದಕ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. 

2014ರಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಯ ಅಧೀನದ ಕೆವಿಕೆಯಲ್ಲಿ ಸೇವೆ ಮುಂದುವರೆಸಿ, ಸುಮಾರು 11 ವರ್ಷಗಳ  ಸುದೀರ್ಘ ವೃತ್ತಿಪರ ತೋಟಗಾರಿಕೆ ವಿಷಯದಲ್ಲಿ ಕೆವಿಕೆ ಧ್ಯೇಯೋದ್ದೇಶಗನುಗುಣವಾಗಿ ರೈತಾಪಿ ವರ್ಗಕ್ಕೆ ಶ್ರಮಿಸುತ್ತಿದ್ದಾರೆ. ಪ್ರಮುಖವಾಗಿ ಈರುಳ್ಳಿಯಲ್ಲಿ ಮುಂಗಾರು ಮತ್ತು ಹಿಂಗಾರು ತಳಿಗಳ ಅಧ್ಯಯನ ನಡೆಸಿ, ಭೀಮಾ ಸೂಪರ್, ಭೀಮಾ ಶಕ್ತಿ, ಭೀಮಾ ಡಾರ್ಕರೆಟ್ ಮತ್ತು ಅರ್ಕಾ ಕಲ್ಯಾಣ ತಳಿಗಳನ್ನು ಹಾಗೂ ಕಲ್ಲಂಗಡಿ ಆಕಾಶ ಮತ್ತು ಅರ್ಕಾ ಮುತ್ತು ಸಂಕರಣ ತಳಿಗಳನ್ನು ರೈತರಿಗೆ ಪರಿಚಯಿಸಿದ್ದಾರೆ. ರೈತರ ತಾಕುಗಳಲ್ಲಿ ಮುಂಚೂಣಿ ಪ್ರಾತ್ಯಕ್ಷಿಕೆಗಳ ಮೂಲಕ ಈರುಳ್ಳಿಯಲ್ಲಿ ಸಮಗ್ರ ಬೆಳೆ ನಿರ್ವಹಣಾ ತಾಂತ್ರಿಕತೆಗಳಿಂದ 2500 ಹೆಕ್ಟರ್ ಪ್ರದೇಶದಲ್ಲಿ ವಿಸ್ತರಣೆಯಾಗಿ, ಸರಾಸರಿ ಶೇ. 26ರಷ್ಟು ಇಳುವರಿ ಹೆಚ್ಚಿಸಿದ್ದಾರೆ. ಸೇವಂತಿಗೆಯಲ್ಲಿ ಸಮಗ್ರ ಪೋಷಕಾಂಶ ಮತ್ತು ಬೆಳೆ ನಿರ್ವಹಣೆಯಾಗಿದೆ. ಅರ್ಕಾ ಮಾವು ಸ್ಪೆಷಲ್ ಲಘು ಪೋಷಕಾಂಶದ ಪ್ರತ್ಯಾಕ್ಷಿಗಳ ಮೂಲಕ ಗ್ರಂಥವಾಗಿ ಮಾವಿನ ಬೆಳೆಯಲ್ಲಿ ಪರಿಚಯಿಸಿದ್ದಾರೆ. 

ವಿನೂತನ ಯೋಜನೆಯಡಿಯಲ್ಲಿ ರೈತರ ಸಹಭಾಗಿತ್ವದಲ್ಲಿ ಈರುಳ್ಳಿ ಬೀಜೋತ್ಪಾದನೆ ಪ್ರಾತ್ಯಕ್ಷಿಕೆಗಳಿಂದ ಈರುಳ್ಳಿ ಬೆಳೆಗಾರರನ್ನು ಒಗ್ಗೂಡಿಸಿ ಹೊಸದುರ್ಗ ಹೊಸಕುಂದುರು ಗ್ರಾಮವನ್ನು ಈರುಳ್ಳಿ ಬೀಜಗ್ರಾಮವನ್ನಾಗಿ ಪರಿಚಯಿಸಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿದ್ದಾರೆ. ಈರುಳ್ಳಿ ಬೀಜ ಗ್ರಾಮದ ಯಶೋಗಾಥೆಯು ಇಸಿಎಆರ್ ಅಂತರ್ಜಾಲದ ಮುಖಪುಟದಲ್ಲಿ ಬಿತ್ತರಣೆಯಾಗಿ, ವಿಶ್ವವಿದ್ಯಾಲಯದ ಹೆಸರು ರಾಷ್ಟ್ರಮಟ್ಟದಲ್ಲಿ ಪರಿಚಯಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ 3440 ಹೆಕ್ಟರ್ ಪ್ರದೇಶದಲ್ಲಿ ಈರುಳ್ಳಿಯ ಹೊಸ ಸುಧಾರಿತ ತಳಿಗಳು ರೈತರ ಜಮೀನನಲ್ಲಿ ಬೆಳೆಯಲಾಗುತ್ತಿದೆ. 45 ಯಶೋಗಾಥೆ ಪರಿಚಯಿಸುವ ಜತೆಗೆ ಐದು ತೋಟಗಾರಿಕೆ ರೈತ ಉತ್ಪಾದಕ ಕಂಪನಿಗಳಿಗೆ ಅಭಿವೃದ್ಧಿಗೆ ತಾಂತ್ರಿಕ ಮಾಹಿತಿ ನೀಡುತ್ತಾ ಬಂದಿದ್ದಾರೆ. 

ಶೇಡಬಾಳದಂತಹ ಗ್ರಾಮೀಣ ಭಾಗದ ಕೃಷಿ ಕುಟುಂಬದಲ್ಲಿ ಜನಿಸಿ ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಿಂದಲೇ ವರ್ಗದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುತ್ತಾ ಹಲವಾರು ಚಿನ್ನದ ಪದಕಗಳನ್ನು ಪಡೆದುಕೊಂಡು 2021-22 ನೇ ಸಾಲಿನ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ ಲಭಿಸಿರುವುದಕ್ಕೆ ಶೇಡಬಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಡಾ. ಪ್ರಕಾಶ ಕೆರೂರೆಯವರನ್ನು ಅಭಿನಂದಿಸುತ್ತಿದ್ದಾರೆ. 


ಸುದ್ದಿ ಓದಿ