ಬಳ್ಳಾರಿ: ಬಾಲ್ಯ ವಿವಾಹ ಮುಕ್ತಿ ರಥಕ್ಕೆ ಸಂಸದ ಈ.ತುಕಾರಾಮ್ ಚಾಲನೆ ನೀಡಿ ಕರೆಬಾಲ್ಯ ವಿವಾಹ ತಡೆಗೆ ಎಲ್ಲರೂ ಕೈ ಜೋಡಿಸಬೇಕು

ಬಳ್ಳಾರಿ: ಬಾಲ್ಯ ವಿವಾಹ ಮುಕ್ತಿ ರಥಕ್ಕೆ ಸಂಸದ ಈ.ತುಕಾರಾಮ್ ಚಾಲನೆ ನೀಡಿ ಕರೆಬಾಲ್ಯ ವಿವಾಹ ತಡೆಗೆ ಎಲ್ಲರೂ ಕೈ ಜೋಡಿಸಬೇಕು Bellary: MP E. Tukaram flagged off the child marriage freedom chariot and called for everyone to joi

ಬಳ್ಳಾರಿ 05:  ಬಾಲ್ಯ ವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು, ಇದರಿಂದ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹಾಗಾಗಿ ಬಾಲ್ಯವಿವಾಹ ತಡೆಗಟ್ಟಲು ಎಲ್ಲರ ಪಾತ್ರ ಬಹು ಮುಖ್ಯವಾಗಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ.ತುಕಾರಾಮ್ ಅವರು ಹೇಳಿದರು. ‘ಬಾಲ್ಯವಿವಾಹ ಮುಕ್ತ ಭಾರತ’ 100 ದಿನಗಳ ಅಭಿಯಾನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸಹಾಯವಾಣಿ 1098/112 ಹಾಗೂ ರೀಚ್ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮುಕ್ತಿ ರಥ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌.ಕೆ ಅವರು ಮಾತನಾಡಿ, 18 ವರ್ಷದೊಳಗಿನ ಹೆಣ್ಣು ಮಕ್ಕಳಲ್ಲಿ ದೈಹಿಕ, ಮಾನಸಿಕ, ಹಾಗೂ ಶಾರೀರಿಕ ಬೆಳವಣಿಗೆಯು ತೀವ್ರವಾಗಿರುತ್ತದೆ. ಮಕ್ಕಳ ಬಾಲ್ಯವು ಅತ್ಯಮೂಲ್ಯವಾದದ್ದು. ಮಕ್ಕಳು ಅವರ ಹಕ್ಕುಗಳನ್ನು ಆನಂದಿಸಬೇಕಾದ ಸಮಯದಲ್ಲಿ ಸೂಕ್ತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ವಿವಾಹ ಮಾಡಿದರೆ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ-2016ರ ಕಾಯ್ದೆಯಡಿ ಶಿಕ್ಷೆ ವಿಧಿಸಬಹುದಾಗಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪೆನ್ನೇಕರ್ ಅವರು ಮಾತನಾಡಿ, ಬಾಲ್ಯವಿವಾಹವನ್ನು ನೆರವೇರಿಸಿದ, ಪ್ರೋತ್ಸಾಹಿಸಿದ ಮತ್ತು ಪಾಲ್ಗೊಂಡವರಿಗೂ ಸಹ ಜೈಲು ಶಿಕ್ಷೆ ಜೊತೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದ್ದು,

ಯಾರು ಸಹ ಬಾಲ್ಯ ವಿವಾಹಗಳಲ್ಲಿ ಭಾಗವಹಿಸಬಾರದು ಮತ್ತು ಯಾವುದೇ ರೀತಿಯ ಬಾಲ್ಯವಿವಾಹಗಳಿಗೆ ಅವಕಾಶ ನೀಡಬಾರದು ಎಂದರು. ರೀಚ್ ಸಂಸ್ಥೆಯ ಕಾರ್ಯದರ್ಶಿ ಜಿ.ಎನ್‌.ಸಿಂಹ ಮಾತನಾಡಿ, 2024 ನ.27 ರಂದು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಸಚಿವಾಲಯವು ’ಬಾಲ್ಯ ವಿವಾಹ ಮುಕ್ತ ಭಾರತ’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ಇದರಿಂದ ಬಾಲ್ಯ ವಿವಾಹಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. 2030ಕ್ಕೆ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಮಾಡಬೇಕು. ಬಾಲ್ಯ ವಿವಾಹ ಕುರಿತು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಅರಿವು ಮೂಡಿಸಬೇಕು ಎಂಬ ಮುಖ್ಯ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಧಿಕಾರಿಗಳು, ಮಕ್ಕಳು, ಸಾರ್ವಜನಿಕರು ಪ್ರತಿಯೊಬ್ಬರು ಸೇರಿ ಬಾಲ್ಯ ವಿವಾಹ ಮುಕ್ತ ಮಾಡುವಲ್ಲಿ ಕೈಜೋಡಿಸಬೇಕು.

ಬಾಲ್ಯ ವಿವಾಹ ಮುಕ್ತಿ ರಥ ವಾಹನವು ಬಳ್ಳಾರಿ ಆಯ್ದ ತಾಲ್ಲೂಕು ಮತ್ತು ಹಳ್ಳಿಗಳಲ್ಲಿ ಸಂಚರಿಸಲಿದ್ದು, ಸುಮಾರು 30 ರಿಂದ 50 ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಿದೆ ಎಂದರು.ಬಳಿಕ ಗಣ್ಯರು “ಬಾಲ್ಯ ವಿವಾಹ ನಿಷೇಧಿಸಿದೆ, ಎಚ್ಚರ”ಎಂಬ ಭಿತ್ತಿಪತ್ರ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಬಾಲ್ಯ ವಿವಾಹ ನಿಷೇಧ ಕುರಿತ ಪ್ರತಿಜ್ಞೆ ಬೋಧಿಸಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್‌.ಎನ್‌., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ.ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ರೀಚ್ ಸಂಸ್ಥೆಯ ಸಿಬ್ಬಂದಿಗಳು ಇದ್ದರು.