ಅಥಣಿ

ಹಿಂದೂ ಧರ್ಮದಲ್ಲಿ ಹುಟ್ಟಿರುವುದಕ್ಕೆ ಅಭಿಮಾನವಿರಲಿ

ಹಿಂದೂ ಧರ್ಮದಲ್ಲಿ ಹುಟ್ಟಿರುವುದಕ್ಕೆ ಅಭಿಮಾನವಿರಲಿ

ಸಾಮಾಜಿಕ ಸದ್ಭಾವನಾ ಸಭೆಯಲ್ಲಿ ಉತ್ತರಾಧಿಮಠದ ಸತ್ಯಾಥ್ಮತೀರ್ಥ ಸ್ವಾಮೀಜಿ ಕರೆ 

ಅಥಣಿ 23: ‘ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ ಸರ್ವ ದೇವೋ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ’ ಎಂದರೆ ಆಕಾಶದಿಂದ ಬೀಳುವ ನೀರು ಬೇರೆ ಬೇರೆಯಾಗಿ ಹರಿದರೂ ಕೂಡ ಸೇರುವುದು ಸಾಗರವನ್ನೆ ಹಾಗೆಯೇ ಬೇರೆ ಬೇರೆ ದೇವರನ್ನೂ ಪೂಜಿಸಿದರೂ ಕೂಡ ನಮ್ಮ ಭಕ್ತಿ ಭಗವಂತನನ್ನೇ ತಲುಪುತ್ತದೆ ಎಂದು ಉತ್ತರಾಧಿಮಠದ ಸತ್ಯಾಥ್ಮತೀರ್ಥ ಸ್ವಾಮೀಜಿ ಹೇಳಿದರು. ಅವರು ವಿಶ್ವಹಿಂದು ಪರಿಷತ್ ವತಿಯಿಂದ ಆರ್ ಎಚ್ ಕುಲಕರ್ಣಿ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾಜಿಕ ಸದ್ಭಾವನಾ ಸಭೆಯಲ್ಲಿ ಹಿಂದೂ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಮತ್ತು ವಿಶ್ವಗುರು ಭಾರತ ವಿಷಯ ಕುರಿತು ಮಾತನಾಡುತ್ತಿದ್ದರು. 

ಹಿಂದೂ ಧರ್ಮ ಜಗತ್ತಿಗೆ ಮಾರ್ಗದರ್ಶನ ಮಾಡುವಂತಹ ಅತ್ಯಂತ ಶ್ರೇಷ್ಠ ಧರ್ಮ. ಸರ್ವಧರ್ಮಗಳಲ್ಲಿ ಶ್ರೇಷ್ಠವಾದ ಧರ್ಮ ಎಲ್ಲರೂ ತಮ್ಮ ತಮ್ಮ ಧರ್ಮಗಳ ಮಹತ್ವವನ್ನು ಹೇಳುತ್ತಿರಬಹುದು ಆದರೆ ಬಂಗಾರಕ್ಕೆ ಅದರದೇ ಆದ ಶ್ರೇಷ್ಠತೆ ಇದೆ. ಹಿಂದೂ ಧರ್ಮ ಬಂಗಾರದಂತೆ ಇದರ ಮಹತ್ವ ಬೇರಾವ ಧರ್ಮಗಳಿಗೂ ಇಲ್ಲ, ನಾವು ಈ ಧರ್ಮದಲ್ಲಿ ಹುಟ್ಟಿದ್ದೇವೆ ಎನ್ನುವದಕ್ಕೆ ನಮ್ಮೆಲ್ಲರಲ್ಲಿ ಅಭಿಮಾನವಿರಲಿ ಎಂದ ಅವರು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಧರ್ಮಾಂತರಣ ನಡೆಯುತ್ತಿದೆ ಎಂದು ಕೇಳಲ್ಪಡುತ್ತಿದೆ ಇದೆಲ್ಲವುಗಳನ್ನು ನಿಲ್ಲಿಸುವ ದಾರಿಯೆಂದರೆ ಭಗವಂತನನ್ನು ಸ್ವಚ್ಛ ಮನಸ್ಸಿನಿಂದ ಆರಾಧಿಸುವುದು, ಯಾರು ಭಗವಂತನ ಆರಾಧನೆಯಲ್ಲಿ ತಮ್ಮನ್ನು ಲೀನವಾಗಿಸಿಕೊಂಡಿರುತ್ತಾರೆಯೋ ಅವರಲ್ಲಿ ಧರ್ಮ ಬಿಟ್ಟು ಬೇರೆ ಧರ್ಮ ಸ್ವೀಕರಿಸಬೇಕೆನ್ನುವ ಆಲೋಚನೆಯೂ ಕೂಡ ಸುಳಿಯುವುದಿಲ್ಲ ಎಂದರು. 

ನಮ್ಮ ಸನಾತನ ಭಾರತೀಯ ಸಂಸ್ಕೃತಿ ನಮಗೆ ನಮ್ಮ ಜೀವನ ಪದ್ಧತಿಯನ್ನು ತಿಳಿಸಿಕೊಡುವುದರೊಂದಿಗೆ ಎಲ್ಲ ಧರ್ಮಗಳ ಬಗೆಗೆಯೂ ಗೌರವದಿಂದ ಕಾಣುವಂತಹ ಜ್ಞಾನವನ್ನು ನೀಡಿದೆ. ನಮ್ಮ ಧರ್ಮ ಗೃಂಥಗಳಲ್ಲಿ ಜ್ಞಾನದ ಭಂಡಾರವೇ ಇದೆ, ಆಯುರ್ವೆದ, ವೇದ, ಯೋಗ, ವಿಜ್ಞಾನ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಹ ನಮ್ಮ ಪೂರ್ವಜರು ಅತ್ಯಂತ ಉತ್ತಮ ಸಾಧನೆ ಮಾಡಿದ್ದರು ಅವರ ಈ ಸಾಧನೆಗಳು ಇಂದು ಜಗತ್ತಿಗೆ ಮಾರ್ಗದರ್ಶನ ಮಾಡುತ್ತಿವೆ ಎನ್ನುವುದು ನಮಗೆಲ್ಲ ಹೆಮ್ಮೆಯ ವಿಷಯ.  ನಾವೆಲ್ಲ ವಿವಿಧ ಪದ್ಧತಿಗಳಿಂದ ಬಂದಿದ್ದರೂ ಸಹ ಭಾರತೀಯ ಸಂಸ್ಕೃತಿ, ಅಸ್ಮಿತೆ ಹಾಗೂ ರಕ್ಷಣೆಯ ವಿಷಯ ಬಂದಾಗ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎನ್ನುವುದನ್ನು ಮರೆಯದೇ ನಿಷ್ಠೆಯಿಂದ ಭಾರತ ಮಾತೆಯ ಸೇವೆ ಮಾಡಬೇಕು ಎಂದ ಅವರು ಹಿರಿಯರು ಗುರುಗಳು ಮಠಾಧೀಶರು ತಂದೆತಾಯಿ ಎಲ್ಲರೂ ಸೇರಿ ನಮ್ಮ ಹಿಂದೂ ಧರ್ಮದ ಪ್ರಾಮುಖ್ಯತೆಯನ್ನು ಶ್ರೇಷ್ಠತೆಯನ್ನು ಎತ್ತಿ ಹಿಡಿಯೋಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವಹಿಂದೂ ಪರಿಷತ್, ಬಜರಂಗದಳಗಳಂತಹ ಇನ್ನೂ ಅನೇಕ ಸಂಘಟನೆಗಳು ಈ ನಿಟ್ಟಿನಲ್ಲೊ ಕಾರ್ಯ ಮಾಡುತ್ತಿದ್ದು ಅವರ ಕಾರ್ಯ ವ್ಯಾಪ್ತಿ ಇನ್ನೂ ಹೆಚ್ಚು ಹೆಚ್ಚಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು. 

ಎಸ.ವ್ಹಿ.ಜೋಶಿ ಸ್ವಾಮಿಜಿಗಳನ್ನು ಪರಿಚಯಿಸಿದರು, ಕಲಬುರ್ಗಿಯ ಶರಣ ಬಸವ ಸಂಸ್ಥಾನದ ಹಾಗೂ ವಿಶ್ವಹಿಂದೂ ಪರಿಷತ್ ಉತ್ತರ ಪ್ರಾಂತ ಉಪಾಧ್ಯಕ್ಷ ಲಿಂಗರಾಜ ಅಪ್ಪಾಜೀ ವಿಶ್ವಹಿಂದೂ ಪರಿಷತ್ ಕಾರ್ಯ ವೈಖರಿಯ ಬಗೆಗೆ ಮಾತನಾಡಿದರು. ವಿಶ್ವಹಿಂದೂ ಪರಿಷತ್ ಬೆಳಗಾವಿ ಜಿಲ್ಲಾಧ್ಯಕ್ಷ ಡಾ.ಆರ್‌.ಕೆ.ಬಾಗಿ ಸ್ವಾಗತಿಸಿದರು. ಕಾರ್ಯದರ್ಶಿ ನಾರಾಯಣ ಮಠಾಧಿಕಾರಿ ಪರಿಚಯಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರಾ​‍್ರಂತ ಸಹಕಾರ್ಯವಾಹ ಅರವಿಂದ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿಶ್ವನಾಥ ಕುಲಕರ್ಣಿ ಸ್ವಾಗತ ಗೀತೆ ಪ್ರಸ್ತುತ ಪಡಿಸಿದರು. 

ಜಂಬಗಿಯ ಸಿದ್ದೇಶ್ವರ ಮಠದ ಸುರೇಶ ಸ್ವಾಮೀಜಿ, ಅಥಣಿ ಶಾಸಕ ಮಹೇಶ ಕುಮಠಳ್ಳಿ, ಪ್ರಾಂತ ಧರ್ಮಾಚಾರ್ಯ ಪ್ರಮುಖ ಹಾಗೂ ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕಟೇಶ ದೇಶಪಾಂಡೆ, ವಿಹಿಂಪ ಉತ್ತರ ಪ್ರಾಂತ ಸಹಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ಮಹಾವೀರ ಹಳ್ಳೂರ, ಸೌರಭ ಕುಕರ್ಣಿ, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಅಂಬರೀಶ ಸುಳೆಗಾಂವ, ಡಾ.ಅಮೋಲ ಸರಡೆ, ಉಮೇಶರಾವ ಬಂಟೋಡಕರ, ಪ್ರಭಾಕರ ಚವ್ಹಾಣ, ಅರುಣ ಯಲಗುದ್ರಿ, ರಾಜು ನಾಡಗೌಡ, ಅಶೋಕ ದಾನಗೌಡರ, ಅರುಣ ಬಾಸಿಂಗಿ, ಎ.ಎಂ.ಖೊಬ್ರಿ, ದೀಲೀಪ ಕಾಂಬಳೆ, ಅನೀಲ ದೇಶಪಾಂಡೆ ಸೇರಿದಂತೆ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ