ಬಸವೇಶ್ವರ ಜಾತ್ರಾ ಮಹೋತ್ಸವ: ವಿಭೂತಿ, ಲಿಂಗಧಾರಣೆ ಕಾರ್ಯಕ್ರಮ
ಇಂಡಿ: ಕೊರೋನಾ ಸಂದರ್ಭದಲ್ಲಿ ಎಲ್ಲ ದೇವಸ್ಥಾನಗಳು ಮುಚ್ಚಿದ್ದವು. ಎಲ್ಲ ಧರ್ಮದವರು ದೇವಸ್ಥಾನಕ್ಕೆ, ಚರ್ಚಿಗೆ, ಮಸೀದಿಗೆ ಬರಬೇಡಿ ಎಂದು ಹೇಳಿದರು. ಎಲ್ಲ ಧರ್ಮದವರಿಗೆ ಪೂಜೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಲಿಂಗಾಯತ ಜನರ ಕೊರಳಿನಲ್ಲಿನ ಲಿಂಗಕ್ಕೆ ಪ್ರತೀ ದಿನವೂ ಪೂಜೆ ತಪ್ಪಲಿಲ್ಲ. ಮನೆಯಲ್ಲೇ ಇದ್ದರೂ ಶಿವನ ಆರಾಧನೆ ಮಾಡುವುದನ್ನು ಲಿಂಗಾಯತ ಸಮುದಾಯ ಬಿಡಲಿಲ್ಲ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬೋಳೆಗಾಂವ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ವಿಭೂತಿ, ಲಿಂಗಧಾರಣೆ ಹಾಗೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಲಿಂಗಾಯತ ಪಂಚಮಸಾಲಿ ಸಮಾಜ ಕೃಷಿ ಪ್ರಧಾನ ಸಮಾಜವಾಗಿದೆ. ಪ್ರತೀ ಬಾರಿ ಸಮರ್ಕ ಮಳೆಯಾಗದೆ, ಇಲ್ಲವಾರೆ ಹೆಚ್ಚಿನ ಮಳೆಯಾಗಿ ಬೆಳೆ ಹಾನಿಯಾಗಿ ರೈತರು ಸಂಕಷ್ಟಕ್ಕೀಡಾಗುತ್ತಾರೆ. ಇಡೀ ಜಗತ್ತಿಗೆ ಅನ್ನ ನೀಡುವ ರೈತನ ನೆರವಿಗೆ ಸರಕಾರಗಳು ಬರಬೇಕಿದೆ. ಪಂಚಮಸಾಲಿ ಸಮಾಜದಲ್ಲಿನ ಬಡ ಮಕ್ಕಳ ವಿದ್ಯಾಭ್ಯಾಸ ಹಾಗೂ ನೌಕರಿಗಾಗಿ 2ಎ ಮೀಸಲಾತಿ ಅವಶ್ಯಕವಾಗಿದೆ. ಹೀಗಾಗಿ ಸರಕಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ಕೂಡಲಸಂಗಮ ಶ್ರೀಗಳು ಹಗಲು-ರಾತ್ರಿ ಎನ್ನದೆ ಸಮಾಜದ ಏಳ್ಗೆಗೆ ದುಡಿಯುತಿದ್ದಾರೆ. ಅವರ ಬೆನ್ನಿಗೆ ಇಡೀ ಸಮಾಜ ನಿಂತಿದೆ. ನಮ್ಮ ಪಕ್ಷವೂ ಸಹ ಮೀಸಲಾತಿ ನೀಡುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಕಾನೂನು ಅಡೆತಡೆಗಳು ಏನಾದರೂ ಇರಬಹುದು ಸಮಾಜಕ್ಕೆ ನಮ್ಮ ಸರಕಾರ ಮೀಸಲಾತಿ ನೀಡೇ-ನೀಡುತ್ತದೆ ಎಂಬ ವಿಶ್ವಾಸವಿದೆ ಎಂದರು.
ಸಮಾಜದ ಅಧ್ಯಕ್ಷ ವಿ.ಹೆಚ್. ಬಿರಾದಾರ ಅಧ್ಯಕ್ಷತೆವಹಿಸಿದ್ದರು.
ಇದೆ ಸಂದರ್ಭದಲ್ಲಿ ನೂರೈವತ್ತು ಜನರಿಗೆ ವಿಭೂತಿ ಹಾಗೂ ಲಿಂಗಧಾರಣೆ ಮಾಡಲಾಯಿತು.
ಸುಧಾಕರಗೌಡ ಬಿರಾದಾರ, ಉಮೇಶ ಬಳಬಟ್ಟಿ, ಪ್ರಭುಗೌಡ ಪಾಟೀಲ, ರಮೇಶ ಮುಂಜಣ್ಣಿ, ಚಂದ್ರಶೇಖರ ಮಿರಗಿ, ಪರಮೇಶ್ವರ ಬಿರಾದಾರ, ಭೀಮರಾಯ ಹುಣಶ್ಯಾಳ, ಛಾಯಪ್ಪ ನಾಗಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.
ಸ್ವಾತಂತ್ಯ್ರ ಅಮೃತಮಹೋತ್ಸವದ ಸಂದರ್ಭದಲ್ಲಿ ಆ.22ರ ಒಳಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಶ್ವಾಸವಿದೆ. ನಾವು ಪಾದಯಾತ್ರೆ ಮಾಡುವಾಗ ಬೊಮ್ಮಾಯಿ ಅವರು ನಮಗೆ ಝಡ್ಪ್ಲಸ್ ಸೆಕ್ಯೂರಿಟಿ ನೀಡಿದ್ದರು. ನಮ್ಮ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ಸಮಾಜದ ಋಣ ತೀರಿಸುವ ಅವಕಾಶ ಅವರಿಗಿದೆ. ಋಣ ತೀರಿಸುತ್ತಾರೆ ಎಂಬ ವಿಶ್ವಾಸವೂ ನಮಗಿದೆ. ಬೇಗನೆ ಮೀಸಲಾತಿ ಘೋಷಿಸಬೇಕು.
-ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ.
ಲಿಂಗಾಯತ ಪಂಚಮಸಾಲಿ ಜಗದ್ಗುರುಪೀಠ ಕೂಡಲಸಂಗಮ.