ಇಂಡಿ

ಬಿಜೆಪಿ ಮಂಡಲದ ಕಾರ್ಯಕಾರಿಣಿ ಸಭೆ

ಬಿಜೆಪಿ ಮಂಡಲದ ಕಾರ್ಯಕಾರಿಣಿ ಸಭೆ

ಲೋಕದರ್ಶನ ವರದಿ 

ಇಂಡಿ 12: ಬಿಜೆಪಿಗೆ ಯಾವ ನಾಯಕರೂ ಅನಿವಾರ್ಯವಲ್ಲ. ಒಗ್ಗಟ್ಟಾಗಿ ಕೆಲಸ ಮಾಡಿ ಕಾರ‌್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಳ್ಳಿಗಳಲ್ಲಿ ಕೇಂದ್ರ್ರ ಹಾಗೂ ರಾಜ್ಯ ಸರಕಾರದ ಸಾಧನೆಯ ಬಗ್ಗೆ ತಿಳಿಸಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಮನಗೌಡ ಎಸ್‌. ಪಾಟೀಲ ಕೂಚಬಾಳ ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದರು. 

ಸೋಮವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಮಂಡಲದ ಕಾರ‌್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. 

ಕಾರ‌್ಯಕರ್ತರು ಬಿಜೆಪಿ ಪಕ್ಷದ ಜೀವಾಳ ಮತ್ತು ಶಕ್ತಿಯಾಗಿದ್ದಾರೆ. ಎಲ್ಲರೂ ಪಕ್ಷ ಸಂಘಟನೆಗೆ ಒಗ್ಗಟ್ಟಿನಿಂದ ಶ್ರಮಿಸಬೇಕು. ಮುಂದಿನ 4-5 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತಿದೆ. ಪಕ್ಷದ ವಿವಿಧ ಪ್ರಕೋಷ್ಠಗಳ ಕಾರ‌್ಯಕರ್ತರು ಪಕ್ಷ ಸಂಘಟನೆಯಲ್ಲಿ ಶ್ರಮಿಸಬೇಕು ಎಂದ ಅವರು, ರಾಜ್ಯದಲ್ಲಿ ಸುಮಾರು 150 ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಯ್ಕೆಮಾಡುವ ಗುರಿ ಹೊಂದಿದೆ. ಬಿಜೆಪಿ ನಾಯಕರುಗಳು ಎಲ್ಲರೂ ಒಂದುಗೂಡಿ ಪಕ್ಷ ಸಂಘಟನೆ ಹಾಗೂ ಕಾರ‌್ಯಕರ್ತರು ಪಡೆಗಳೊಂದಿಗೆ ಸಂಘಟಿತರಾಗಬೇಕೆಂದು ಕರೆ ನೀಡಿದರು. 60 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಜಾತಿ, ಧರ್ಮವನ್ನು ಒಡೆದಾಳುವ ರಾಜಕಾರಣ ಮಾಡಿ ದೇಶ ಒಡೆದಾಳಿದ್ದಾರೆ. ಬರುವ 2023ರಲ್ಲಿ ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಶಾಸಕರಾಗುವುದು ಸೂರ್ಯ, ಚಂದ್ರರಷ್ಠೇ ಸತ್ಯ ಎಂದರು. 

ಕೋವಿಡ್ ಸಂದರ್ಭದಲ್ಲಿ ಇಡೀ ವಿಶ್ವ ತಲ್ಲಣಗೊಂಡಾಗ ದೇಶದ ಪ್ರಧಾನ ಮಂತ್ರಿ ಮೋದಿಜಿಯವರು ದೇಶದ ಜನತೆಯ ಜೀವ ರಕ್ಷಣೆಗಾಗಿ 3 ಬಾರಿ ಉಚಿತವಾಗಿ ಕೋವಿಡ್ ಲಸಿಕೆ ಹಾಕಿಸಿ 130 ಕೋಟಿ ಜನರ ಪ್ರಾಣ ರಕ್ಷಣೆ ಮಾಡಿದ್ದಾರೆ. ಜಮ್ಮು-ಕಾಶ್ಮೀರದ 370 ಆರ್ಟಿಕಲ್ ರದ್ದು ಮಾಡುವುದು ನಮ್ಮ ಪೂರ್ವಜರ ಕನಸಾಗಿತ್ತು. ಕೇಂದ್ರ ಸರಕಾರ ಇಂದು ಆ ಕನಸು ನನಸು ಮಾಡಿದೆ. ಅಲ್ಲಿಯ ಜನ ಭಯದಿಂದ ಜೀವನ ಸಾಗಿಸಬೇಕಾಗಿತ್ತು ಆದರೆ ಈಗ ನಿರಾಳವಾಗಿ ಜೀವನ ಸಾಗಿಸುವಂತೆ ನರೇಂದ್ರ ಮೋದಿ ಆಡಳಿತ ನಡೆಸಿದ್ದಾರೆ ಎಂದರು. 

ಕಾರ‌್ಯಕರ್ತರ ಅಸಮಾಧಾನವನ್ನು ಗಂಭೀರವಾಗಿ ಕಂಡ ಜಿಲ್ಲಾಧ್ಯಕ್ಷ ಕೂಚಬಾಳ ಕಾರ‌್ಯಕರ್ತರನ್ನು ಕಡೆಗಣಿಸಿದರೆ ಯಾವ ನಾಯಕರೂ ಪಕ್ಷಕ್ಕೆ ಅನಿವಾರ್ಯವಲ್ಲ ಎಂಬ ಸ್ಪಷ್ಠ ಸಂದೇಶವನ್ನು ನಾಯಕರಿಗೆ ನೀಡಿದರು. 


ಬಿಜೆಪಿ  ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಪ್ರಸ್ತಾಪವಾಗಿ ಮಾತನಾಡಿದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಓಬಿಸಿ ಮೋರ್ಚಾ ರಾಜ್ಯ ಕಾರ‌್ಯಕಾರಿಣಿ ಸದಸ್ಯ ಶೀಲವಂತ ಉಮರಾಣಿ, ಬಿಜೆಪಿ ವೃತ್ತಿಪರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಎಸ್‌.ಎ. ಪಾಟೀಲ್ ಡೋಮನಾಳ, ಮುಖಂಡ ಅನಿಲಕುಮಾರ ಜಮಾದಾರ ಮಾತನಾಡಿದರು. 

ವೇದಿಕೆಯಲ್ಲಿ ಮಂಡಲ ಉಸ್ತುವಾರಿ ರಾಜಶೇಖರ ಪೂಜಾರಿ, ಸಿದ್ದಲಿಂಗ ಹಂಜಗಿ,  ಶ್ರೀಶೈಲಗೌಡ ಬಿರಾದಾರ, ಹಣಮಂತರಾಯಗೌಡ ಪಾಟೀಲ, ಸಿದ್ರಾಮಪ್ಪ ದೇಸಾಯಿ, ಯಲ್ಲಪ್ಪ ಹದರಿ, ರವಿ ವಗ್ಗೆ, ಮಹಿಳಾಮೋರ್ಚಾ ಅಧ್ಯೆಕ್ಷೆ ರೂಗಿಮಠ ಇದ್ದರು. 

ಅಶೋಕಗೌಡ ಬಿರಾದಾರ, ಮುದ್ದುಗೌಡ ಪಾಟೀಲ, ರವಿ ಮಗ್ಗೆ, ಸಂಜು ದಶವಂತ, ಶಾಂತು ಕಂಬಾರ, ರಾಜಶೇಖರ ಯರಗಲ್ಲ, ಸೋಮು ಕುಂಬಾರ, ಶಿವಯೋಗಿ ರೂಗಿಮಠ, ಸೇರಿದಂತೆ ಅನೇಕ ಬಿಜೆಪಿ ಕಾರ‌್ಯಕರ್ತರು ಇದ್ದರು. 

ಬಾಕ್ಸ- 

ಸೋಮವಾರ ಇಂಡಿ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಬಿಜೆಪಿ ಕಾರ‌್ಯಕಾರಿಣಿ ಸಭೆಯಲ್ಲಿ ಬಿಜೆಪಿ ಕಾರ‌್ಯಕರ್ತರು ತಮ್ಮ ನಾಯಕರಲ್ಲಿ ಒಗ್ಗಟ್ಟು ಇಲ್ಲದ ಕಾರಣಕ್ಕಾಗಿ ಬಿಜೆಪಿ ಜಿಲ್ಲಾಧ್ಯಕ್ಷರ ಮುಂದೆಯೇ ವಾಗ್ದಾಳಿ ನಡೆಸಿ, ಮೊದಲು ನಾಯಕರನ್ನು ಒಗ್ಗೂಡಿಸಿ ಇಲ್ಲದಿದ್ದರೆ ಈ ಬಾರಿಯೂ ಸಹ ಬಿಜೆಪಿ ಇಂಡಿ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕಾರ‌್ಯಕರ್ತರು ತಿಳಿಸಿದರು. 


ಸುದ್ದಿ ಓದಿ