ಬಿಜೆಪಿ ನಾಯಕರುಗಳು ಕಾಂಗ್ರೆಸ್ ಮುಖಂಡ ಲಖನ್ ಮನೆಗೆ ಭೇಟಿ
ಗೋಕಾಕ 5: ನಗರಕ್ಕೆ ಆಗಮಿಸಿದ ಸಚಿವರಾದ ಜಗದೀಶ ಶೆಟ್ಟರ, ಭೈರತಿ ಬಸವರಾಜ, ಉಮೇಶ ಕತ್ತಿ ಹಾಗೂ ಬಿಜೆಪಿ ನಾಯಕರುಗಳು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನಡುಕ ಹುಟ್ಟಿಸಿದೆ.
ಕಳೆದ ಮೂರು ದಿನಗಳ ಹಿಂದಷ್ಟೇ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಡಿಕೆಶಿ ರಾಜೀನಾಮೆಗೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೆ ಸೋಮವಾರದಂದು ಬಿಜೆಪಿ ನಾಯಕರುಗಳು ಲಖನ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿರುವದು ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಮೂಡಿಸಿದೆ.
ಕಳೆದ ವಿಧಾನ ಸಭೆಯ ಉಪಚುನಾವಣೆಯ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರದಿಂದ ಸಹೋದರ ರಮೇಶ ವಿರುದ್ಧ ಲಖನ್ ಕಾಂಗ್ರೇಸ್ ಪಕ್ಷದಿಂದ ಸ್ಫರ್ಧಿಸಿ ಗಮನಸೆಳೆದಿದ್ದರು. ಸದ್ಯ ಲಖನ್ ಜಾರಕಿಹೊಳಿ ಅವರ ಮನೆಗೆ ಬಿಜೆಪಿ ನಾಯಕರುಗಳು ಭೇಟಿ ನೀಡಿರುವದು ಅಚ್ಚರಿ ಮೂಡಿಸಿದೆ.
ಸಚಿವರುಗಳ ಭೇಟಿಯ ನಂತರ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಲಖನ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೆಸ್ನಿಂದ ಸಹೋದರ ರಮೇಶ ಜಾರಕಿಹೊಳಿ ವಿರುದ್ಧ ಸ್ಫರ್ಧಿಸಿದ್ದು, ಈ ಲೋಕಸಭಾ ಉಪಚುನಾವಣೆಯಲ್ಲಿ ಲಖನ್ ಸಹೋದರ ಸತೀಶ ಬೆನ್ನಿಗೆ ನಿಲ್ಲುತ್ತಾರೆ ಎಂಬ ಮಾತುಗಳು ಈ ವರೆಗೆ ಕೇಳಿ ಬರುತ್ತಿದ್ದವು. ಸದ್ಯ ಬಿಜೆಪಿಯ ಸಚಿವರುಗಳು ಹಾಗೂ ನಾಯಕರುಗಳು ಲಖನ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಲಖನ್ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರೆಂಬುವದಕ್ಕೆ ಪುಷ್ಠಿ ನೀಡುವಂತಿದೆ.