ಅಥಣಿ

ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದು, ಬಿಜೆಪಿ ಸರಕಾರ: ಲಕ್ಷ್ಮಣ ಸವದಿ

ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದು, ಬಿಜೆಪಿ ಸರಕಾರ: ಲಕ್ಷ್ಮಣ ಸವದಿ

ವೆಂಕಟೇಶ ದೇಶಪಾಂಡೆ 

ಅಥಣಿ. 11: ರಾಜ್ಯದ ರೈತರಿಗೆ ಮೊಟ್ಟ ಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಿದ್ದು ಬಿಜೆಪಿ ಸರಕಾರ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು.  

ಅವರು ತಾಲೂಕಿನ ದರೂರ ಗ್ರಾಮದಲ್ಲಿ ಬ್ರಹ್ಮದೇವ ಕೃಷಿ ಪತ್ತಿನ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡುತ್ತಿದ್ದರು.  

2008 ರಲ್ಲಿ ಬಿಜೆಪಿ ಸರಕಾರದಲ್ಲಿ ನಾನು ಸಹಕಾರಿ ಸಚಿವನಾಗಿ ಕಾರ್ಯನಿರ್ವಹಿಸುತ್ತಿರುವ ಸಮಯದಲ್ಲಿ ರೈತರ ಆರ್ಥಿಕ ಚೇತರಿಕೆಗಾಗಿ ಶೂನ್ಯ ಬಡ್ಡಿ ದರದ ಪ್ರಸ್ತಾವನೆ ಅಂದಿನ ಮುಖ್ಯಮಂತ್ರಿ ಯಡಿಯೂರ​‍್ಪನವರ ಗಮನಕ್ಕೆ ತಂದು ಶೂನ್ಯ ಬಡ್ಡಿ ದರದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಇದರಿಂದ ರಾಜ್ಯದ ಕೋಟ್ಯಾಂತರ ರೈತರಿಗೆ ಅನಕೂಲವಾಗಿದೆ ಎಂದ ಅವರು ನಾನೊಬ್ಬ ರೈತನಾಗಿ, ಸಹಕಾರಿ ಧುರೀಣನಾಗಿ ಶೂನ್ಯ ಬಡ್ಡಿ ದರದ ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವೆ ಎಂದು ಹೇಳಿದರು.  

ಸಹಕಾರಿ ಸಂಘಗಳನ್ನು ಪ್ರಾರಂಭಿಸುವುದು ಸುಲಭ ಆದರೆ  ಜನರ ವಿಶ್ವಾಸ ಗಳಿಸಿ ಸಹಕಾರಿ ಸಂಘಗಳನ್ನು ಮುನ್ನಡೆಸಿಕೊಂಡು ಹೋಗಬೇಕಿದೆ. ಇತ್ತೀಚಿಗೆ ದೇಶದಲ್ಲಿ, ರಾಜ್ಯದಲ್ಲಿ ಅನೇಕ ಸಹಕಾರಿ ಸಂಘಗಳು ಸಾರ್ವಜನಿಕರ ನೂರಾರು ಕೋಟಿ ಠೇವಣಿ ಹಣವನ್ನು ದುರುಪಯೋಗ ಪಡೆಸಿಕೊಂಡಿವೆ. ಸಾರ್ವಜನಿಕರಿಂದ ಪಡೆದುಕೊಂಡ ಠೇವಣಿ ಹಣದ ಸದುಪಯೋಗ ಮಾಡಿಕೊಂಡು ಸಹಕಾರಿ ಸಂಘಗಳನ್ನು ಮುನ್ನಡೆಸಿಕೊಂಡು ಹೋಗಬೇಕಿದೆ ಆಗ ಮಾತ್ರ ಸಹಕಾರಿ ಸಂಘಗಳ ಮೇಲೆ ಸಾರ್ವಜನಿಕರ ವಿಶ್ವಾಸ ಹೆಚ್ಚುತ್ತದೆ ಎಂದರು.  

ಸಹಕಾರ ತತ್ವದಡಿ ಪ್ರಾರಂಭಗೊಂಡ ಗುಜರಾತನ ಅಮೂಲ ಡೇರಿ ವಿಶ್ವದಲ್ಲಿಯೇ ಅತೀ ಹೆಚ್ಚು ಹಾಕು ಸಂಗ್ರಹಿಸುವ ಸಹಕಾರಿ ಸಂಸ್ಥೆಯಾಗಿದೆ. ಈ ಸಹಕಾರಿ ಸಂಸ್ಥೆ ದಿನ ನಿತ್ಯ 100 ಕೋಟಿ ಲೀಟರ್ ಹಾಲು ಸಂಗ್ರಹಿಸಿ ಇಡೀ ವಿಶ್ವಾದ್ಯಂತ ಹಾಲು ಸೇರಿದಂತೆ ಇತರೆ ಹಾಲಿನ ಸಹ ಉತ್ಪನ್ನಗಳನ್ನೂ ಸಹ ಪೂರೈಕೆ ಮಾಡುತ್ತಿದೆ ಎಂದ ಅವರು ಸಹಕಾರಿ ಸಂಘಗಳನ್ನು ದುರುಪಯೋಗ ಮಾಡಿಕೊಳ್ಳದೇ ಬದ್ಧತೆಯಿಂದ ಸಂಘಗಳನ್ನು ಮುನ್ನಡೆಸಿಕೊಂಡು ಜನರ ವಿಶ್ವಾಸಗಳಿಸಬೇಕು ಎಂದು ಕರೆ ನೀಡಿದರು.  

ಸಾನಿಧ್ಯ ವಹಿಸಿ ಮಾತನಾಡಿದ ಪರಮಾನಂದ ವಾಡಿ ಬ್ರಹ್ಮ ದೇವ ಆಶ್ರಮದ ಡಾ.ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಅನೇಕ ಜನಪ್ರಿಯ ಯೋಜನೆಗನ್ನು ಜಾರಿಗೊಳಿಸಿದ್ದಾರೆ ಇಂತಹ ನಾಯಕರ ನೇತೃತ್ವದಲ್ಲಿ ಪ್ರಾರಂಭಗೊಂಡ ಬ್ರಹ್ಮದೇವ ಕೃಷಿ ಪತ್ತಿನ ಸಹಕಾರಿ ಸಂಘ ನಿಶ್ಚಿತವಾಗಿಯೂ ರೈತರ ವಿಶ್ವಾಸಗಳಿಸುತ್ತದೆ ಮತ್ತು ಈಗೀನ ಆಡಳಿತ ಮಂಡಳಿಯ ನೇತೃತ್ದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದ ಅವರು ಲಕ್ಷ್ಮಣ ಸವದಿ ಕೊವೀಡ್ ಸಮಯದಲ್ಲಿ ಮನೆ ಮನೆಗೆ ರೇಷನ್ ಕಿಟ್ಟಗನ್ನು ಹಂಚುವ ಮೂಲಕ ಆತಂಕದಲ್ಲಿದ್ದ ಕುಟುಂಬಗಳಲ್ಲಿ ಆತ್ಮ ವಿಶ್ವಾಸ ಹಾಗೂ ಜೀವನೋತ್ಸಾಹ ಹೆಚ್ಚಿಸಿದ್ದಾರೆ ಇವರ ಕಾರ್ಯ ಅಭಿನಂದನಾರ್ಹ ಎಂದರು.  

ದರೂರ ಗ್ರಾಮಸ್ಥರ ಪರವಾಗಿ ಕೊವೀಡ್‌ನ ಸಂಕಷ್ಟದ ಸಮಯದಲ್ಲಿ ರೇಷನ್ ಕಿಟ್ಟ ಪೂರೈಸಿದ ಲಕ್ಷ್ಮಣ ಸವದಿ ಇವರನ್ನು ಸತ್ಕರಿಸಲಾಯಿತು. ನೂತನವಾಗಿ ಪ್ರಾರಂಭಿಸಲಾದ ಬ್ರಹ್ಮದೇವ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ 96 ಲಕ್ಷ ರೂ.ಗಳ ಸಾಲ ಹಂಚಿಕೆ ಮಾಡಲಾಯಿತು. ಸಹಕಾರಿ ಸಂಘದ ಅಧ್ಯಕ್ಷ ಗುರುಲಿಂಗ ಗುಮತಾಜ, ಉಪಾಧ್ಯಕ್ಷ ನಿಂಗಪ್ಪ ಅಥಣಿ, ಧುರೀಣರಾದ ಫರೀದ ಅವಟಿ, ಪಿಎಲ್‌ಡಿ ಬ್ಯಾಂಕ ಮಾಜಿ ಅಧ್ಯಕ್ಷ ದುಂಡಪ್ಪ ಅಸ್ಕಿ, ಅಪ್ಪಾಸಾಹೇಬ ಅಸ್ಕಿ, ಸುರೇಶ ಮಾಯಣ್ಣವರ, ಜಗದೀಶ ದಳವಾಯಿ, ಬಿಡಿಸಿಸಿ ಬ್ಯಾಂಕನ ನಿಯಂತ್ರಣಾಧಿಕಾರಿ ಎಸ್‌.ಎಸ್‌.ನಂದೇಶ್ವರ, ದರೂರ ಗ್ರಾ.ಪಂ ಅಧ್ಯಕ್ಷ ಮಹೇಶ ಕಾಂಬಳೆ, ಉಪಾಧ್ಯಕ್ಷೆ ತಂಗೆವ್ವಾ ಐಗಳಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎ.ವೈ.ಗಲಗಲಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ