ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ: ಕುಮಠಳ್ಳಿ ; ವಾಯುವ್ಯ ಶಿಕ್ಷಕರ, ಪದವಿಧರ ಚುನಾವಣೆ: ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ
ಲೋಕದರ್ಶನ ವರದಿ
ಅಥಣಿ 05: ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಖಂಡಿತವಾಗಿಯೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ವಿಶ್ವಾಸ ವ್ಯಕ್ತ ಪಡಿಸಿದರು. ಅವರು ವಿಧಾನ ಪರಿಷತ್ ಚುನಾವಣೆಯ ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಹಾಗೂ ವಾಯುವ್ಯ ಶಿಕ್ಷಕ ಹಾಗೂ ಪದವಿಧರ ಮತದಾರರಲ್ಲಿ ಮತ ಯಾಚಿಸಿ ಅಥಣಿಯಲ್ಲಿ ಮಾತನಾಡುತ್ತಿದ್ದರು.
ಶಿಕ್ಷಕ ಹಾಗೂ ಪದವಿ ಕ್ಷೇತ್ರಗಳ ಅಭ್ಯರ್ಥಿಗಳಾದ ಅರುಣ ಶಹಾಪುರ ಹಾಗೂ ಹಣಮಂತ ನಿರಾಣಿ ಇವರು ತಮ್ಮ ಕ್ಷೇತ್ರಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಒದಗೊಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ ಜೊತೆಗೆ ಮತದಾರರ ಆಶೋತ್ತರಗಳಿಗೆ ಸ್ಪಂದಿಸುವಂತಹ ಮನೋಭಾವ ಹೊಂದಿರುವುದರಿಂದ ಇವರನ್ನು ಪರಿಷತ್ಗೆ ಆರಿಸಿ ಕಳುಹಿಸಬೇಕೆಂದು ಮನವಿ ಮಾಡಿದ ಅವರು ಸರಕಾರದಿಂದ ಆಗಿರುವಂತಹ ಅಭಿವೃದ್ಧಿ ಕಾರ್ಯಗಳೂ ಸಹ ಮತದಾರರಿಗೆ ಭರವಸೆ ಮೂಡಿಸಿವೆ ಯುವಜನ ಪರವಾದ ನೀತಿಗಳನ್ನು ನಮ್ಮ ಸರಕಾರ ರೂಪಿಸಿದ್ದು ಪದವಿಧರರ ಉತ್ತಮ ಭವಿಷ್ಯಕ್ಕಾಗಿ ಸಕಲರಿಗೂ ಉದ್ಯೋಗ ನೀತಿ ಜಾರಿಗೆ ತರಲಾಗಿದೆ ಹಾಗೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ, ಶಿಕ್ಷಕರಿಗೆ ವೇತನ ಅನುದಾನ, ವೇತನ ಆಯೋಗಗಳ ರಚನೆ, ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ಮುಂತಾದವುಗಳಿಂದ ಮತದಾರರಲ್ಲಿ ನಮ್ಮ ಪಕ್ಷದ ಪರವಾಗಿ ಭರವಸೆ ಇದೆ. ಈ ಬಾರಿಯೂ ಸಹ ಶಿಕ್ಷಕ ಹಾಗೂ ಪದವಿಧರ ಕ್ಷೇತ್ರದ ನಮ್ಮ ಅಭ್ಯರ್ಥಿಗಳು ಗೆಲ್ಲಿಸುವ ಮೂಲಕ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ತಾವೆಲ್ಲ ಕೈ ಜೋಡಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ ಮಾತನಾಡಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ತೊಡಗಿದ್ದು ನಿಶ್ಚಿತವಾಗಿಯೂ ಸಹ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದ ಅವರು ಈ ಮಹಾ ಸಂಪರ್ಕ ಅಭಿಯಾನದಲ್ಲಿ ಪ್ರತಿಯೊಬ್ಬ ಮತದಾರರನ್ನೂ ಬೇಟಿಯಾಗಿ ಅವರನ್ನು ಮನವೊಲಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅಶೋಕ ದಾನಗೊಂಡ, ಅಥಣಿ ಮಂಡಳ ಉಪಾಧ್ಯಕ್ಷ ಪುಟ್ಟು ಹಿರೇಮಠ, ಅಥಣಿ ಮಂಡಳ ಯುವಮೋರ್ಚಾ ಕಾರ್ಯದರ್ಶಿ ಅಭಯ್ ಸಗರೆ, ಜಿಲ್ಲಾ ಮಾಧ್ಯಮ ಸಂಚಾಲಕಿ ಮೃಣಾಲಿನಿ ದೇಶಪಾಂಡೆ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.