ಇಂಡಿ

ಬಿಜೆಪಿ ರೈತಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ

ಬಿಜೆಪಿ ರೈತಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ
ವಿಜಯಪುರ ರಸ್ತೆಯ ಶುಭಂ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ ಜಿಲ್ಲಾ ರೈತಮೋರ್ಚಾ ಕಾರ್ಯಕಾರಿಣಿ ಸಭೆ ಜರುಗಿತು.

ಇಂಡಿ 25: ವಿಜಯಪುರ ಜಿಲ್ಲಾ ನೀರಾವರಿಗೆ ಬಿಜೆಪಿ ಸರಕಾರದ ಕೊಡುಗೆ ಇದೆ. ನಾ ಮಾಡೀನಿ, ನಾ ಮಾಡೀನಿ ಅತ್ ಸಮ್ಮ ಸುಳ್ಳ ಹೇಳಕೋತ ಜಿಲ್ಲೆಯ ಜನರಿಗೆ ಗೊಂದಲಕ್ಕ ಯಾಕ ಈಡ ಮಾಡಾಕತ್ತೀರಿ…..ಸುಳ್ ಹೇಳ್ಕೋತ ಯಾಕ್ ಕಚ್ಚಾಡ್ತೀರೋ ಮಾರಾಯಗೋಳಾ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್‍ನ ಎಂ.ಬಿ. ಪಾಟೀಲ ಹಾಗೂ ಯಶವಂತ್ರಾಯಗೌಡ ಪಾಟೀಲರಿಗೆ ಟಾಂಗ್ ನೀಡಿದರು.
ಅವರು ಬುಧವಾರ ಪಟ್ಟಣದ ವಿಜಯಪುರ ರಸ್ತೆಯ ಶುಭಂ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ರೈತಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಧಾನಸೌಧದಾಗ ಯಾ ಫೈಲ್ ಎಲ್ಲಿ ಹೋತಾದ, ಯಾವಾಗ ಸಿಎಂ ಹತ್ರ ಹೋಗಿ ಸಹಿ ಆತಾದತ್ತ ನೋಡಾಕ ಅಲ್ಲಿನ ಅಧಿಕಾರಿಗಳಿಗೆ ಹಿಡ್ಕೊಂಡಿರ‍್ತಾರ, ಸಿಎಂ ಅನುದಾನ ಬಿಡುಗಡೆ ಮಾಡ್ತಾರ ಅತ್ತ ಗೊತ್ತಾಗುತ್ತಿದ್ದಂಗ ಹಿಂದಿನ ದಿನ ಸಿಎಂ ಅವರ ಮನಿಗಿ ಹೋಗಿ ಒಂದು ಮನವಿ ಕೊಟ್ಟು ಪೇಪರ್ ಮತ್ತ ಟೀವ್ಯಾಗ ಹಾಕಿಸಿ ನಾವೇ ಮಾಡ್ಸೀವಿ ಅತ್ತ ಫೋಜ್ ಕೊಡ್ತಾರ ಎಂದು ವ್ಯಂಗ್ಯವಾಡಿದರು.
ಸ್ವಾತಂತ್ರ್ಯೆ ಸಿಕ್ಕಿ 50 ವರ್ಷ ಗತಿಸುತನ ಕಾಂಗ್ರೆಸ್ ಪಕ್ಷನೇ ಆಡಳಿತ ಮಾಡ್ಯಾದ. ಅಲ್ಲೀತನ ಪುಣ್ಯಾತ್ಮರು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚ ಮಾಡಿಲ್ಲ.. ಬರೇ ಜನರಿಗೆ ಸುಳ್ಳ ಹೆಳ್ಕೋತ ರಾಜಕಾರಣ ಮಾಡೀರಿ ಎಂದು ಕಿಡಿಕಾರಿದರು.
ದೇಶದಲ್ಲಿ ಮೋದಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಸಾಕಷ್ಟು ಬದಲಾವಣೆಯಾಗಿವೆ. ರೈತ ವಲಯಕ್ಕೂ ಸಾಕಷ್ಟು ಅನುಕೂಲಗಳಾಗಿವೆ. ಎಪಿಎಂಸಿ ಕಾಯ್ದೆ ಬದಲಾವಣೆ ಮಾಡಿದ್ದರಿಂದಲೂ ರೈತರಿಗೆ ಅನುಕೂಲವಾಗಿದೆ. ಆದರೆ ಕೆಲ ದಲ್ಲಾಳಿಗಳು ರೈತರ ಹೆಸರಿನಲ್ಲಿ ಇನ್ನೂ ಪ್ರತಿಭಟನೆ ನಡೆಸುತ್ತಿವೆ ಎಂದು ಆರೋಪಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಬಂದಾಗ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಲು ಮೋದಿಯವರ ಬಳಿ ಚುನಾಯಿತ ಪ್ರತಿನಿಧಿಗಳ ನಿಯೋಗ ಕೊಂಡೊಯ್ಯಲು ಮನವಿ ಮಾಡಿದ್ದೇನೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದಾಗ ಮಾತ್ರ ಎತ್ತರ ಹೆಚ್ಚಿಸಲು ಅವಕಾಶ ಸಿಗುತ್ತದೆ. ರಾಜ್ಯ ಸರಕಾರದಿಂದ ಈ ಯೋಜನೆಗೆ ಹಣ ವ್ಯಯ ಮಾಡಲು ಅಸಾಧ್ಯ ಹೀಗಾಗಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ ಕೆಂದ್ರ ಸರಕಾರದ ಸಹಯೋಗದಲ್ಲಿ ಆಲಮಟ್ಟಿ ಅಣೆಕಟು ಎತ್ತರವಾಗಬೇಕಿದೆ ಎಂದರು. ಈ ಯೋಜನೆಗೆ ಕನಿಷ್ಠ 1 ಲಕ್ಷ ಕೋಟಿ ರೂಪಾಯಿ ವ್ಯಯವಾಗಲಿದೆ ಎಂದ ಅವರು ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಗಳು ಮತ್ತು ನಮ್ಮ ಭಾಗದವರೇ ನೀರಾವರಿ ಮಂತ್ರಿಗಳಾಗಿರುವುದರಿಂದ ಈ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ಮಾಜಿಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಹಲವಾರು ಯೋಜನೆ ಜಾರಿ ಮಾಡಿದ್ದಾರೆ. ಆ ಎಲ್ಲ ಯೋಜನೆಗಳ ಬಗ್ಗೆ ಕಾರ್ಯಕರ್ತರು ರೈತರಿಗೆ ತಿಳುವಳಿಕೆ ನೀಡಬೇಕು ಎಂದ ಅವರು ಬಿಜೆಪಿ ಸರಕಾರದಿಂದಲೇ ಜಿಲ್ಲೆಗೆ ನೀರಾವರಿ ಯೋಜನೆಗಳ ಮಂಜೂರಾತಿಯಾಗಿದೆ. ಯಡಿಯೂರಪ್ಪನವರು ಮತ್ತು ಕೆ.ಎಸ್. ಈಶ್ವರಪ್ಪ ನವರು ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದನ್ನು ಸ್ಮರಿಸಿ, ಜಗದೀಶ ಶಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ನೀರಾವರಿ ಯೋಜನೆಗಳಿಗೆ 17 ಸಾವಿರ ಕೋಟಿ ರೂಪಾಯಿ ಆಡಳಿತ ಅನುಮೋದನೆ ನೀಡಿರುವುದಾಗಿ ತಿಳಿಸಿದರು.
ಹೋರ್ತಿ ಭಾಗದಲ್ಲಿ ಅಣ್ಣಪ್ಪ ಖೈನೂರ ಅವರು ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಧರಣಿ ನಡೆಸಿದಾಗ ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಖುದ್ದು ಧರಣಿ ಸ್ಥಳಕ್ಕೆ ಭೇಟಿ ನೀಡಿ ನೀರಾವರಿ ಮಾಡುವ ಭರವಸೆ ನೀಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದು ನೀರಾವರಿಯ ಬಗ್ಗೆ ಸಾಕಷ್ಟು ಅನುಭವವಿದೆ. ಅವರು ಜಿಲ್ಲೆಯ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ನೀಡುವ ವಿಶ್ವಾಸವಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಬಿಜೆಪಿ ರೈತಮೋರ್ಚಾ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ರೈತಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿಕಾಂತ ಬಗಲಿ, ಬಸು ಜಾಧವ ಮಾತನಾಡಿದರು.
ಸಾವಯುವ ಕೃಷಿ ಮಾಡುವ ಮೂಲಕ ಸಾಧನೆಗೈದ 12 ರೈತರನ್ನು ರೈತಮೋರ್ಚಾ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಅರುಣ ಶಹಾಪೂರ, ದಯಾಸಾಗರ ಪಾಟೀಲ, ಶಂಕರಗೌಡ ಪಾಟೀಲ, ಸುರೇಶಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ಅನೀಲ ಜಮಾದಾರ, ರಾಜು ಕಾಡೆ, ಸಿದ್ದಲಿಂಗ ಹಂಜಗಿ, ಸಿದ್ದು ಬುಳ್ಳಾ ಸೇರಿದಂತೆ ಮತ್ತಿತರರು ಇದ್ದರು.
ಸಭೆಯಲ್ಲಿ ಮಲ್ಲನಗೌಡ ಬಿರಾದಾರ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ಶಾಂತು ಕಂಬಾರ ಸೇರಿದಂತೆ ಮೂರುನೂರಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ