ಕಾಗವಾಡ

ಆಜಾದಿ ಕಾ ಅಮೃತ ಮಹೋತ್ಸವ: ಭವ್ಯ ಶೋಭಾ ಜಾಥಾ

ಆಜಾದಿ ಕಾ ಅಮೃತ ಮಹೋತ್ಸವ: ಭವ್ಯ ಶೋಭಾ ಜಾಥಾ

ವಿಜೃಂಭಣೆಯ ಮೆರವಣಿಗೆಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ 

ಶೇಡಬಾಳ 13: ಕಾಗವಾಡ ಪಟ್ಟಣದಲ್ಲಿ ಭಾರತ ಸ್ವಾತಂತ್ರ್ಯದ 75 ನೇ "ಆಜಾದಿ ಕಾ ಅಮೃತ ಮಹೋತ್ಸವ"ದ ಭವ್ಯ ಶೋಭಾ ಜಾಥಾ ಕಾರ್ಯಕ್ರಮವು ನ ಭೂತೋ ನ ಭವಿಷ್ಯತೋ ಎನ್ನುವಂತೆ ಅತ್ಯಂತ ವಿಜೃಂಭಣೆಯಿಂದ ಶನಿವಾರ ದಿ. 13 ರಂದು ಜರುಗಿತು. 

ಕಾಗವಾಡ ತಾಲೂಕಾಡಳಿತ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ, ಅರಣ್ಯ, ಪೋಲಿಸ್ ಇಲಾಖೆ, ಶಿವಾನಂದ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ "ಆಜಾದಿ ಕಾ ಅಮೃತ ಮಹೋತ್ಸವ"ದ ಭವ್ಯ ಶೋಭಾ ಜಾಥಾ ಕಾರ್ಯಕ್ರಮವನ್ನು ಕಾಗವಾಡ ಶಾಸಕ ಶ್ರೀಮಂತ ಬಾಳಾಸಾಬ ಪಾಟೀಲರು ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವದರೊಂದಿಗೆ ಭವ್ಯ ಶೋಭಾ ಯಾತ್ರೆಗೆ ಚಾಲನೆ ನೀಡಿದರು.  

ಅಂಬಾರಿ ಹೊತ್ತ ಆನೆಯ ಮೇಲೆ ಭಾರತಾಂಬೆ ಭಾವಚಿತ್ರ ಇರಿಸಲಾಗಿತ್ತು. ಮೆರವಣಿಗೆಯ ಮುಂದೆ ವಿವಿಧ ಕಲಾ ತಂಡಗಳು ಝಾಂಜ ಪಥಕ ಮೊದಲಾದ ವಾದ್ಯವೃಂದದವರು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು.  

ಮೆರವಣಿಗೆಯಲ್ಲಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ, ತಾಲೂಕಾ ದಂಡಾಧಿಕಾರಿ ರಾಜೇಶ ಬುರ್ಲಿ, ಅಥಣಿ ಸಿಪಿಆಯ್ ರವೀಂದ್ರ ನಾಯ್ಕೋಡೆ ತೆರೆದ ವಾಹನದಲ್ಲಿ ನಿಂತು ಸಾರ್ವಜನಿಕರಿಗೆ ಅಮೃತ ಮಹೋತ್ಸವದ ಶುಭಾಷಯಗಳನ್ನು ಸಲ್ಲಿಸಿದರು. 

ಮೆರವಣಿಗೆಯಲ್ಲಿ ಎನ್‌ಸಿಸಿ, ಎನ್‌ಎನ್‌ಎಸ್, ಮಾಜಿ ಸೈನಿಕರು, ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ವ್ಯಾಪರಸ್ಥರು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು. ಮೆರವಣಿಗೆಯೂದ್ದಕ್ಕೂ ವಿದ್ಯಾರ್ಥಿಗಳು ಭಾರತಾಂಬೆಗೆ ಜೈಕಾರಗಳನ್ನು ಕೂಗುತ್ತಾ ಭಾರತಾಂಬೆಯ ಪರ ದೇಶ ಭಕ್ತಿ ಗೀತೆಗಳನ್ನು ಹಾಡುತ್ತಾ ಸಂಭ್ರಮಿಸಿ ಸಂತೋಷ ಪಟ್ಟರು.  

ಇಲ್ಲಿನ ಮಲ್ಲಿಕಾರ್ಜುನ ಮಹಾವಿದ್ಯಾಲಯದಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ಬಸ್ ನಿಲ್ದಾಣ, ಅಂಬೇಡಕರ ಭವನ, ಸಂತೂಬಾಯಿ ಮಂದಿರ, ಶಿವಾನಂದ ಕಾಲೇಜು ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾವಿದ್ಯಾಲಯಕ್ಕೆ ಬಂದು ಮುಕ್ತಾಯಗೊಂಡಿತು. ಸುಮಾರು 1 ಕಿ.ಮೀ. ನಷ್ಟು ಉದ್ದ ಮೆರವಣಿಗೆ ಸಾಗಿತ್ತು. ಕಾಗವಾಡ ಪೋಲಿಸ್ ಠಾಣೆಯ ಪಿಎಸ್‌ಐ ಬಿ.ಎಂ.ರಬಕವಿ ಹಾಗೂ ಸಿಬ್ಬಂದಿ ವರ್ಗದವರು ಸೂಕ್ತ ಬಂದೋಬಸ್ತ್‌ ವ್ಯವಸ್ಥೆಯನ್ನು ಕೈಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಹಾಗೂ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ, ಪೌಷ್ಟಿಕ ಆಹಾರ ಶಿಬಿರ ಮೊದಲಾದ ಕಾರ್ಯಕ್ರಮಗಳು ಜರುಗಿದವು. 

ಈ ಸಮಯದಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ, ಸಿಪಿಆಯ್ ರವೀಂದ್ರ ನಾಯ್ಕೋಡೆ, ಬಿಇಓ ಎಂ.ಆರ್‌.ಮುಂಜೆ,  ಪ್ರಾ. ವ್ಹಿ.ಎಸ್‌.ತುಗಶೆಟ್ಟಿ, ಸಿಡಿಪಿಓ ಸಂಜೀವ ಸದಲಗಿ ಸೇರಿದಂತೆ ಎಲ್ಲ ಇಲಾಖೆಗಳ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ