ಲೇಖಕರು ತಮ್ಮ ಬರವಣಿಗೆ ಮೂಲಕ ಸಾಮಾಜಿಕ ಕಳಕಳಿ ಹೊಂದಿರಬೇಕು: ರಘುನಾಥ
ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಜಮಖಂಡಿ 14: ಇಂದು ಕನ್ನಡದ ಕೆಲ ಲೇಖಕರು ರಾಜಕೀಯ ವಕ್ತಾರರಂತೆ ವರ್ತಿಸುತ್ತಿದ್ದು, ಇದು ಸ್ಫೂರ್ತಿದಾಯಕವಲ್ಲ. ಲೇಖಕರಲ್ಲಿಯೇ ವಿಭಜನೆಯಾಗುತ್ತದೆ, ಸಾಹಿತ್ಯ ಕ್ಷೇತ್ರವನ್ನು ಲೇಖಕರು ಕೊಳಕು ಮಾಡುವ ಪ್ರಸಂಗ ಎದುರಾಗಿದೆ. ಬರವಣಿಗೆ ಬದ್ಧತೆಯಿಂದ ಕೂಡಿರಬೇಕು. ಕನ್ನಡ ಲೇಖಕರು ಕೆಲ ಗುಂಪುಗಳಲ್ಲಿ ಹಂಚಿಹೋಗಿದ್ದಾರೆಂದು ಹಿರಿಯ ಪತ್ರಕರ್ತ ರಘುನಾಥ ಚ.ಹ ಹೇಳಿದರು.
ನಗರದ ಗುರುದೇವ ರಾನಡೆ ಶಿಕ್ಷಣ ಸಂಸ್ಥೆಯಲ್ಲಿ ಕಸಾಪ, ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಬೀಳಗಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಕೊಡಮಾಡಿದ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲೇಖಕರು ತಮ್ಮ ಬರವಣಿಗೆ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಳಕಳಿ ಹೊಂದಿರುವಂತವರಾಗಿರಬೇಕು. ಈಗಿನ ಕಾಲದ ಮನೋರಂಜನೆ ಸಾಹಿತ್ಯ ಮೂಲ ಸಾಹಿತ್ಯದ ರುಚಿಯನ್ನು ಕಡಿಮೆ ಮಾಡುತ್ತಿದೆ.
ಮನೋರಂಜನೆ ಸಾಹಿತ್ಯದ ಜೊತೆಗೂ ಮನೋವಿಕಾಸ ಮೂಡಿಬರಬೇಕು. ಅಂತಹ ಸಾಹಿತ್ಯ ಪ್ರಭಾವ ಬಿರುತ್ತದೆ. ಗಂಭಿರ ಸಾಹಿತ್ಯಗಳು ಆಗಿನ ಕಾಲದಿಂದಲೂ ತನ್ನ ಶ್ರೇಷ್ಠತೆಯನ್ನು ಕಾಪಾಡಿಕೊಂಡು ಬಂದಿವೆ. ಗಂಭಿರ ಸಾಹಿತ್ಯದ ಜೊತೆ ಜನಪರ ಸಾಹಿತ್ಯಕ್ಕೂ ಕೂಡ ತನ್ನದೇ ಗೌರವವಿದೆ. ಕೃತಿಗಳು ಯಾವುದೇ ಚೌಕತ್ತಿಗೆ ಒಳಪಡದೆ ಎಲ್ಲ ಓದುಗರನ್ನು ಗಮನ ಸೆಳೆಯುವಂತಹ ಬರಹವಿರಬೇಕು.
ಈಗಿನ ಸಾಹಿತಿಗಳು, ಲೇಖಕರು ರಾಜಕಾರಣಕ್ಕೆ ಮಣಿದು ರಾಜಕೀಯದವರ ಕೈಗೊಂಬೆಯಾಗಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಹಾಗೆ ಮಾಡದೇ ಸಾಹಿತಿಗಳ ಲೇಖನಗಳು ಯಾವುದೇ ರಾಜಕಾರಣಕ್ಕೊಳಪಡದೆ ಲೇಖನ ವಲಯದ ನಡುವೆ ವಿಭಜನೆ ಉಂಟು ಮಾಡಬಾರದು. ಲೇಖಕರು ತಮ್ಮ ಮೇಲಿನ ಭೌತಿಕ ಒತ್ತಡ, ಪ್ರಭಾವದಿಂದ ತಮ್ಮ ವೈಚಾರಿಕ ಸಿದ್ದಂತಗಳನ್ನು ಉಳಿಸಿಕೊಳ್ಳದೆ ಸಾಹಿತಿಗಳು, ಲೇಖಕರು ಬೇರೆಯವರ ಕೈ ಗೊಂಬೆಯಾಗುತ್ತಿದ್ದಾರೆ. ಬರವಣಿಗೆಯೂ ಬೌಧಿಕ, ಕಲಾತ್ಮಕ, ಸದ್ಭಾತಿ ಎಂಬ ಚೌಕಟ್ಟನ್ನು ಹೆಚ್ಚಿಸಬೇಕು.ಲೇಖನಗಳು ತನ್ನದೇ ಅದ ವಿಶೇಷ ಗೌರವ ಹೊಂದಿದೆ. ಅಂತಹ ಹಲವಾರು ಲೇಖಕರು ಮತ್ತು ಸಾಹಿತ್ಯಕರ ನಡುವೆ 40 ಜನರಿಗೆ ದತ್ತಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಗಮನಾರ್ಹ ಎಂದರು.
ಅತಿಥಿಗಳಾಗಿದ್ದ ಧಾರವಾಡ ಆಕಾಶವಾಣಿ ಮುಖ್ಯಸ್ಥ ಬಸು ಬೇವಿನಗಿಡದ ಮಾತನಾಡಿ, ಸಾಹಿತ್ಯ ರಚನೆಯಲ್ಲಿ ಸೂಕ್ಷ್ಮತೆ ಇರಬೇಕು, ಸಾಮಾಜಿಕ ಜವಾಬ್ದಾರಿಯಿಂದ ಜನಪರವಾದ ಸಾಹಿತ್ಯ ರಚನೆ ಮಾಡಬೇಕು. ಬರಹಗಾರರು ಅಂಜಿಕೆಯನ್ನು ದಾಟಿ ದಿಟ್ಟತನದಿಂದ ಬರೆಯಬೇಕು. ಪುಸ್ತಕಗಳ ಪ್ರಕಟಣೆ ಮಾಡುವ ದಂಧೆಯಾಗದೇ ಪ್ರಶಸ್ತಿಗೆ ಪ್ರಕಟವಾಗುವ ಪುಸ್ತಕಗಳಾಗಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಜಿಲ್ಲೆಯಲ್ಲಿ 150 ದತ್ತಿ ನಿಧಿಗಳಿವೆ.ಮೂರು ವರ್ಷಗಳಿಂದ ದತ್ತಿ ಪ್ರಶಸ್ತಿ ಪ್ರದಾನ ಜರುಗದ ಕಾರಣ ಕಥೆ,ಕಾವ್ಯ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ,ಲೇಖನ ಸಂಗ್ರಹ, ಜಾನಪದ, ವ್ಯಕ್ತಿ ಚಿತ್ರಣ ಹಾಗೂ ಪತ್ರಿಕಾ ವಿಶೇಷ ಲೇಖನ ಬರೆದವರನ್ನು ಗುರುತಿಸಲಾಗಿದೆ. ಈ ವರ್ಷ 90 ಲೇಖಕರ 110 ಕೃತಿಗಳು ಆಯ್ಕೆಗೆ ಬಂದಿದ್ದವು. ಅದರಲ್ಲಿ 40 ಲೇಖಕರನ್ನು ಆಯ್ಕೆ ಮಾಡಲಾಗಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಜಮಖಂಡಿಯಲ್ಲಿ ಮಾಡುವ ಆಸೆ ಇದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಪ್ರಸಾದ ಆಪ್ಟೆ, ನಿರ್ದೇಶಕ ಶ್ರೀನಿವಾಸ ಅಪರಂಜಿ, ಕಸಾಪ ತಾಲೂಕಾಧ್ಯಕ್ಷ ಸಂತೋಷ ತಳಕೇರಿ ಇದ್ದರು. ಇದೆ ಸಂದರ್ಭದಲ್ಲಿ ರಮೇಶ ಕತ್ತಿ, ದೇವು ಮಾಕೊಂಡ, ನೀ ಶ್ರೀಶೈಲ, ಪ್ರೋ.ದೊಡ್ಡಣ್ಣ ಭಜಂತ್ರಿ, ಸಿದ್ಧಾರೂಡ ಕಟ್ಟಿಮನಿ, ಅನೀಲ ಗುನ್ನಾಪೂರ, ಕೆ.ಎಚ್.ಸೋಮಾಪೂರ, ಶಂಕರ ಬೈಚಬಾಳ, ವೈ.ಜಿ.ಭಗವತಿ, ಹ.ಮ.ಪೂಜಾರಿ, ಡಿ.ಎಂ.ಸಾವಕಾರ, ಗುರುರಾಜ ಕಲೂತಿ, ಡಾ.ಪ್ರಕಾಶ ಖಾಡೆ, ಮಲ್ಲಿಕಾರ್ಜುನ ಹುಲಗಬಾಳಿ, ಬಸವರಾಜ ಕುಂಬಾರ, ಜಿ.ಕೆ.ತಳವಾರ, ಶಂಕರ ಲಮಾಣಿ, ವೆಂಕಟೇಶ ಗುಡೆಪ್ಪನವರ, ಎಚ್.ಎಂ.ಜುಟ್ಟಲ್ ಸೇರಿದಂತೆ 40 ಜನ ಸಾಹಿತಿಗಳಿಗೆ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.