ಧಾರವಾಡ - ಹುಬ್ಬಳ್ಳಿ

ಆಗಷ್ಟ 18ರಂದು ಶಾಂತಲಿಂಗ ಶ್ರೀಗಳ 91ನೇ ವರ್ಧಂತಿ

ಆಗಷ್ಟ 18ರಂದು ಶಾಂತಲಿಂಗ ಶ್ರೀಗಳ 91ನೇ ವರ್ಧಂತಿ

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ತುಲಾಭಾರ ಸೇವೆ ಹಾಗೂ  ಉಡಿತುಂಬುವ ಕಾರ್ಯಕ್ರಮ 

ಧಾರವಾಡ 16 :  ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳವರ 91ನೆಯ ವರ್ಧಂತಿ ಮಹೋತ್ಸವ ಆಗಷ್ಟ 18ರಂದು (ರವಿವಾರ) ಮುಂಜಾನೆ 10 ಗಂಟೆಗೆ ಶ್ರೀಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ.  

ಪರಿಚಯ : 1939ರಲ್ಲಿ ತಮ್ಮ ಐದನೇ ವರ್ಷದಲ್ಲಿಯೇ ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಶ್ರೀಸಂಸ್ಥಾನ ಪಂಚಗೃಹ ಹಿರೇಮಠದ ಗುರುತ್ವಾಧಿಕಾರವನ್ನು ಹೊಂದಿದ್ದು, ಒಂದರ್ಥದಲ್ಲಿ ಅವರದು ಸಂಪೂರ್ಣ 91 ವಸಂತಗಳ ಸುದೀರ್ಘ ಸನ್ಯಾಸ. ಧರ್ಮ ಜಾಗೃತಿ ಕೈಂಕರ್ಯಕ್ಕೆ ಮೊದಲ ಆದ್ಯತೆ ನೀಡಿ, ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಇಷ್ಟಲಿಂಗಾನುಷ್ಠಾನಗೈದು ಭಕ್ತಗಣಕ್ಕೆ ಧರ್ಮದ ಅರಿವು ತುಂಬಿದ್ದಾರೆ. ಅಕ್ಷರ ಮತ್ತು ಪುಸ್ತಕ ಪ್ರೀತಿಯೊಂದಿಗೆ ಪ್ರಾಥಮಿಕ ಹಾಗೂ ಪೌಢ ಶಾಲೆಗಳನ್ನು ಆರಂಭಿಸಿ ಹಳ್ಳಿಗಾಡಿನ ಮಕ್ಕಳ ಶಾಲಾ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ.  ಇವರ 108 ವಚನಗಳ ‘ಶ್ರೀಶಾಂತೇಶ್ವರ ವಚನ ಸುಧೆ’ ಎಂಬ ಕೃತಿ ಪ್ರಕಟಗೊಂಡಿದೆ.  

ತುಲಾಭಾರ ಸೇವೆ : ಆದರ್ಶ ಶಿಕ್ಷಕರಾಗಿದ್ದ ದಿ.ವೀರಯ್ಯ ಯರಗಂಬಳಿಮಠ ಹಾಗೂ ದಿ.ಈರಮ್ಮ ಯರಗಂಬಳಿಮಠ ಅವರ ಸ್ಮರಣೆಯಲ್ಲಿ ಗುರುಮೂರ್ತಿ ಯರಗಂಬಳಿಮಠ, ಅಧ್ಯಾಪಕಿ ಪ್ರೇಮಾ ರುದ್ರಾಪೂರ (ಗುಡಿ), ಖಾದಿ ಕಾರ್ಯಕರ್ತ ಬಿ.ಸಿ. ಕೊಳ್ಳಿ, ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಸುನೀಲ ಗುಡಿ, ಪವನಕುಮಾರ ಮಲ್ಲಿಕಾರ್ಜುನ ಕುಸೂಗಲ್ಲ, ಹಾರೋಬೆಳವಡಿ ಗ್ರಾಮದ ವಿರೂಪಾಕ್ಷಪ್ಪ ಜಕ್ಕಣ್ಣವರ ಹಾಗೂ ರಾಮಣ್ಣ ಜಕ್ಕಣ್ಣವರ, ಬಸಪ್ಪ ಉಗರಗೋಳ ಅವರಿಂದ ಸಕ್ಕರೆ, ಬೆಲ್ಲ, ಅಕ್ಕಿ, ಹಾಗೂ ತೆಂಗಿನಕಾಯಿಗಳ ತುಲಾಭಾರ ಸೇವೆಗಳು ನಡೆಯಲಿವೆ.  

ಉಡಿತುಂಬುವ ಕಾರ್ಯಕ್ರಮ : ಶ್ರೀಮಾತೆ ಆದಿಶಕ್ತಿಯ ಸ್ವರೂಪಿಗಳಾದ 108 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಸಹ ಇದೇ ಸಂದರ್ಭದಲ್ಲಿ ಗ್ರಾಮದ ಶೋಭಾ ಯರಗಂಬಳಿಮಠ ಅವರಿಂದ ಜರುಗಲಿದೆ. ಸಮಾರಂಭದ ಅಂಗವಾಗಿ ಅಮ್ಮಿನಬಾವಿ ಗ್ರಾ.ಪಂ. ಮಾಜಿ ಅಧ್ಯಕ್ಷ ದಿ.ಬಸಯ್ಯ ಗುಡಿ ಅವರ ಸ್ಮರಣೆಯಲ್ಲಿ ಅಬಕಾರಿ ಇಲಾಖೆ ಸಿಪಿಐ ಅಮೃತ ಗುಡಿ ಅವರಿಂದ ಪಾಲ್ಗೊಂಡ ಸಮಸ್ತ ಭಕ್ತ ಸಮೂಹಕ್ಕೆ ದಾಸೋಹ ಸೇವೆ ಜರುಗಲಿದೆ.  


ಸುದ್ದಿ ಓದಿ