ಸೆ.7 ರಂದು ಸಿಸಿಬಿ ವಿಚಾರಣೆಗೆ ಹಾಜರು: ನಟಿ ರಾಗಿಣಿ
ಬೆಂಗಳೂರು, ಸೆಪ್ಟೆಂಬರ್ 3: ಸ್ಯಾಂಡಲ್ ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ಅವರನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿನ ಮಾದಕ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಶಂಕರ್ ಅವರನ್ನು ಬಂಧಿಸಿ, ನಟಿ ರಾಗಿಣಿ ಅವರಿಗೆ ಸಿಸಿಬಿ ವಾಟ್ಸಪ್ ಮೂಲಕ ವಿಚಾರಣೆಗೆ ಹಾಜರಾಗುವಂತೆ
ಸೂಚಿಸಿತ್ತು.ಆದರೆ, ಇಂದು ರಾಗಿಣಿ ವಿಚಾರಣೆಗೆ ಗೈರಾಗಿದ್ದು, ಈ ಕುರಿತು ಟ್ವೀಟ್ ವೊಂದು ಮಾಡಿದ್ದಾರೆ.
ನಿನ್ನೆ ನನಗೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿಯಿಂದ ನೋಟಿಸ್ ಬಂದಿತ್ತು. ಕಡಿಮೆ ಸಮಯದಲ್ಲಿ ನೋಟಿಸ್ ಬಂದಿರುವುದರಿಂದ ವಿಚಾರಣೆಗೆ ಗೈರಾಗಿದ್ದೇನೆ. ಸೋಮವಾರ ವಿಚಾರಣೆಗೆ ಹಾಜರಾಗಲಿದ್ದೇನೆ. ನಾನು ಯಾವುದೇ ರೀತಿಯ ತಪ್ಪನ್ನು ಮಾಡಿಲ್ಲ. ಆದ್ದರಿಂದ ಸಿಸಿಬಿ ಅಧಿಕಾರಿಗಳ ಪ್ರಶ್ನೆ ಗಳಿಗೆ ಉತ್ತರಿಸುವೆ. ಕಾನೂನು ಪ್ರಕ್ರಿಯೆಯನ್ನು ಎಲ್ಲರೂ ಗೌರವಿಸಲೇ ಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಗಿಣಿ ಆಪ್ತ ರವಿಶಂಕರ್ ಅವರನ್ನು ಸಿಸಿಬಿ ನಿನ್ನೆ ಬಂಧಿಸಿ, ಕಾರು ವಶಪಡಿಸಿಕೊಂಡಿತ್ತು.
ಅಲ್ಲದೇ, ಇಂದು ಮೊಬೈಲ್ ವಶಕ್ಕೆ ಪಡೆದು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ರವಿಶಂಕರ್ ಕೆಲವರ ಹೆಸರುಗಳು ಬಹಿರಂಗಗೊಳ್ಳಸಲಿದ್ದಾರೆ ಎನ್ನಲಾಗಿದೆ. ಸದ್ಯ ರವಿಶಂಕರ ಅವರ ಹೇಳಿಕೆ ಆಧರಿಸಿ ಮತ್ತೋರ್ವ ಡ್ರಗ್ಸ್ ಪೆಡ್ಲರ್ ನನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಕಾರ್ತಿಕ್ ರಾಜು ಎಂಬ ಡ್ರಗ್ಸ್ ಪೆಡ್ಲರ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.