ಕಾಗವಾಡ

ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ

ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ

ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಕರೆ; ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ಥಳ ವೀಕ್ಷಣೆ 

ಕಾಗವಾಡ 29: ಬೆಳಗಾವಿ ಜಿಲ್ಲಾ ಮಟ್ಟದ 14ನೇ ಸಾಹಿತ್ಯ ಸಮ್ಮೇಳನ ನಾಳೆ ಶನಿವಾರ ಮತ್ತು ರವಿವಾರ ಎರಡು ದಿನ ವಿಜೃಂಭಣೆಯಿಂದ ಕಾಗವಾಡದಲ್ಲಿ ಜರುಗಲಿದ್ದು, ಸಮ್ಮೇಳನಕ್ಕಾಗಿ ಎಲ್ಲ ಕನ್ನಡ ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಕಾಗವಾಡದಲ್ಲಿ ಹೇಳಿದರು.

ಶುಕ್ರವಾರ ದಿ. 29ರಂದು ಕಾಗವಾಡದ ಮಲ್ಲಿಕಾರ್ಜುನ ಸಭಾ ಮಂಟಪಕ್ಕೆ ಭೇಟಿ ನೀಡಿದ ಬಳಿಕ ಅವರು  ಮಾತನಾಡುತ್ತಿದ್ದರು.

ಕಾಗವಾಡದಲ್ಲಿ ಭವ್ಯವಾದ ಸುಮಾರು 18 ಸಾವಿರ ಚದುರಡಿ ಮಂಟಪ ನಿರ್ಮಿಸಿದ್ದು, ಇಲ್ಲಿಗೆ 25 ಪುಸ್ತಕ ಮಳಿಗೆಗಳು ತೈಯಾರಿಸಿದ್ದೇವೆ. ಬೇರ-ಬೇರೆ ಕನ್ನಡ ಲೇಖಕರ ಪುಸ್ತಕಗಳು ವೀಕ್ಷಣೆ ಮತ್ತು ಓದಲು ಲಭ್ಯವಾಗಲಿವೆ. ಸುಮಾರು 5 ಸಾವಿರ ಜನರಿಗಾಗಿ ಆಹಾರದ ವ್ಯವಸ್ಥೆ ಮಾಡಲಾಗಿದೆ. ಸುಮಾರು 100 ಅಡಿ ಉದ್ದುಯಿರುವ ತಾಯಿ ಭುವನೇಶ್ವರಿ ಧ್ವಜ ವಿದ್ಯಾರ್ಥಿಗಳಿಂದ ಮೆರವಣಿಗೆ ಮುಖಾಂತರ ಸಭಾಮಂಟಪ ವರೆಗೆ ಬರುವ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಇವರನ್ನು ಆನೆ, ಕುದುರೆ, ರಥದೊಂದಿಗೆ ಭವ್ಯ ಮೆರವಣಿಗೆ ಮುಖಾಂತರ ಬೆಳಿಗ್ಗೆ ಬರಮಾಡಿಕೊಳ್ಳುತ್ತಿದ್ದೇವೆ.

ಬೆಳಿಗ್ಗೆ 8 ಗಂಟೆಗೆ ಮಾಜಿ ಯೋಧರಾದ ಬಾಳಗೌಡ ಪಾಟೀಲ ಇವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಇವರಿಂದ ನಾಡಧ್ವಜಾರೋಹಣ, ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಇವರಿಂದ ಪರಿಷತ್ತಿನ ಧ್ವಜಾರೋಹಣ ನೆರವೇರಲಿದೆ. 9 ಗಂಟೆಗೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಕನ್ನಡ ಮಾತೆ ಭುವನೇಶ್ವರಿ ಪ್ರತಿಮೆ ಮೆರವಣಿಗೆ ನೆರವೇರಲಿದೆ. ಹೀಗೆ ಸಂಪೂರ್ಣ ದಿನ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಗಳು ಜರುಗಲಿದ್ದು, ಹೆಚ್ಚಿನ ಸಂಖ್ಯೆಯಿಂದ ಕನ್ನಡ ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು ಕೇಳಿಕೊಂಡರು.

ಈ ವೇಳೆ ಕ.ಸಾ.ಪ ಅಥಣಿ ತಾಲೂಕಾಧ್ಯಕ್ಷ ಡಾ. ಮಹಾಂತೇಶ ಉಕಲಿ, ಕಾಗವಾಡ ತಾಲೂಕಾಧ್ಯಕ್ಷ ಡಾ. ಸಿದ್ದಗೌಡ ಕಾಗೆ, ಸಂಘಟನೆಯ ಸದಸ್ಯರಾದ ಜೆ.ಕೆ.ಪಾಟೀಲ, ಸಿದ್ರಾಮ ಮೋಟಗಿ, ಎಂ.ವೈ.ಮೆನಸಿಣಕಾಯಿ, ಮುತಾಲಿಕ ಸರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿ ಓದಿ