ಅಥಣಿಯ ಜನ ಸಜ್ಜನಶೀಲರು: ಬಂಗಾರಪ್ಪ
ಅಥಣಿ 3: ಅಥಣಿಯ ಜನ ಸಜ್ಜನ ಶೀಲರು ಹೃದಯವಂತರು. ಶಿವಯೋಗಿಗಳ ಪುಣ್ಯಕ್ಷೇತ್ರದಲ್ಲಿ 6 ವರ್ಷಗಳ ಕಾಲ ಸೇವೆ ಮಾಡುವ ಸೌಭಾಗ್ಯ ಒದಗಿ ಬಂದಿದ್ದು ನನ್ನ ಪುಣ್ಯ ಎಂದು ಜಿಲ್ಲಾ ಯೋಜನಾ ನಿರ್ದೇಶಕರಾಗಿ ಪದೋನ್ನತಿ ಹೊಂದಿರುವ ಅಥಣಿ ತಾಲೂಕ ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ರವಿ ಎನ್ ಬಂಗಾರಪ್ಪನವರ ಹೇಳಿದ್ದಾರೆ.
ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಸರಕಾರಿ ನೌಕರರ ಸಂಘದ ವತಿಯಿಂದ ಜಿಲ್ಲಾ ಯೋಜನಾ ನಿರ್ದೇಶಕರಾಗಿ ಪದೋನ್ನತಿ ಹೊಂದಿದ ಪ್ರಯುಕ್ತ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅನೇಕ ಸಂದರ್ಭಗಳಲ್ಲಿ ನಮ್ಮ ಮಾತಿಗೆ ಗೌರವ ನೀಡುತ್ತಾ ಸುಗಮ ಆಡಳಿತಕ್ಕೆ ಸಹಕಾರ ನೀಡಿದ್ದಾರೆ. ಅಥಣಿ ತಾಲೂಕಿನಲ್ಲಿ ಬರಗಾಲ ನಿರ್ವಹಣೆಯಲ್ಲಿ, ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಆದ ಪ್ರವಾಹ ಸಂದರ್ಭದಲ್ಲಿ ಮತ್ತು ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡಿದಾಗ ಇಲ್ಲಿನ ಜನರು ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ತಹಸೀಲ್ದಾರ್ ಆಗಿ ಪದೋನ್ನತಿ ಹೊಂದಿರುವ ರಾಜೇಶ್ ಬುರ್ಲಿಯವರು ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಅಥಣಿ ಪುಣ್ಯಭೂಮಿ ಈ ನಾಡಿನಲ್ಲಿ ಸೇವೆ ಸೇವೆ ಮಾಡುವುದು ಸೌಭಾಗ್ಯ ನೌಕರರಿಗೆ ಇಲ್ಲಿನ ಜನತೆಯ ಸಹೃದಯದ ಸಹಕಾರ ಎಂದೆಂದಿಗೂ ಮರೆಯಲಾಗದು ಎಂದು ಹೇಳಿದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಸರಕಾರಿ ನೌಕರರ ನಮ್ಮ ಸಂಘವು ನಿರಂತರವಾಗಿ ನೌಕರರ ಕಷ್ಟಗಳಿಗೆ ಸ್ಪಂದಿಸುತ್ತಾ ಸಮಸ್ಯೆಗಳ ನಿವಾರಣೆಯಲ್ಲಿ ನಿರಂತರ ಪ್ರಯತ್ನ ಶೀಲವಾಗಿದೆ ಯಾರೊಬ್ಬರಿಂದ ಅಹವಾಲು ಸ್ವೀಕರಿಸದೆ ಅವರ ಸಮಸ್ಯೆ ಪರಿಹರಿಸುವತ್ತ ಕ್ರಿಯಾಶೀಲವಾಗಿದೆ ಎಂದು ಹೇಳಿದರು. ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮಣ್ಣ ಧರಿಗೌಡರ ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್ ಎಸ್ ಮಾಕಾಣಿಯವರು ನಮ್ಮ ಸಂಘ ಪ್ರವಾಹ ಪೀಡಿತ ಸಂದರ್ಭದಲ್ಲಿ ಕೊರೊನ ಸಂದರ್ಭದಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಜನಪರವಾದ ಕಾರ್ಯಗಳಲ್ಲಿ ಕ್ರಿಯಾಶೀಲವಾಗಿದೆ. ಬರುವ ದಿನಮಾನದಲ್ಲಿ ಇನ್ನೂ ಉತ್ತಮ ಕಾರ್ಯಗಳನ್ನು ನಿರ್ವಹಿಸಿ ನೌಕರರ ಹಿತದ ಜೊತೆಗೆ ಸಮಾಜದ ಹಿತ ಕಾಪಾಡುವಲ್ಲಿ ಬದ್ಧವಾಗಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ ಸೇರಿದಂತೆ ತಾಲ್ಲೂಕಿನ ವಿವಿಧ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ನೌಕರರು ಪಾಲ್ಗೊಂಡಿದ್ದರು .ಶ್ರೀಶೈಲ ಪಾಟೀಲ್ ಪ್ರಾರ್ಥಿಸಿದರು. ಮಹಾಂತೇಶ ಘೂಳಪ್ಪನವರ ಕಾರ್ಯಕ್ರಮ ನಿರೂಪಿಸಿದರು.