ಅಶೋಕ್ ಸೇನ್ಗೆ 2026ರ ಆಸ್ಕರ್ ಕ್ಲೈನ್ ಪದಕ: ಈ ಗೌರವ ಪಡೆದ ಮೊದಲ ಭಾರತೀಯ ಭೌತಶಾಸ್ತ್ರಜ್ಞ
ನವದೆಹಲಿ, ಅ. 24 : ಬೆಂಗಳೂರಿನ ಇನ್ಫೋಸಿಸ್ ಮಾಧವ ಚೇರ್ ಪ್ರೊಫೆಸರ್ ಆಗಿರುವ ಖ್ಯಾತ ಭೌತಶಾಸ್ತ್ರಜ್ಞ ಡಾ. ಅಶೋಕ್ ಸೇನ್ ಅವರು 2026ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಕ್ಲೈನ್ ಪದಕಕ್ಕೆ ಭಾಜನರಾಗಿದ್ದಾರೆ. ಈ ಗೌರವ ಪಡೆದ ಮೊದಲ ಭಾರತೀಯ ಭೌತಶಾಸ್ತ್ರಜ್ಞ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಈ ಸಾಧನೆಗಾಗಿ ಪ್ರೊ. ಅಶೋಕ್ ಸೇನ್ ಅವರನ್ನು ಅಭಿನಂದಿಸಿದೆ.
ಸ್ಟ್ರಿಂಗ್ ಥಿಯರಿ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಳನ್ನು ನಡೆಸಿರುವ ಪ್ರೊ. ಸೇನ್ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಎಸ್-ಡ್ಯುಯಾಲಿಟಿ, ಕಪ್ಪು ಕುಳಿಗಳ ಎಂಟ್ರೋಪಿ (ಅಸ್ತವ್ಯಸ್ತತೆಯ ಪ್ರಮಾಣ)ಯ ನಿಖರ ಲೆಕ್ಕಾಚಾರ ಹಾಗೂ ಸ್ಟ್ರಿಂಗ್ ಫೀಲ್ಡ್ ಥಿಯರಿ ಕುರಿತ ಅವರ ಸಂಶೋಧನೆಗಳು ಭೌತಶಾಸ್ತ್ರ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿವೆ.
ಅವರ ಸಂಶೋಧನೆಗಳು ಆಧುನಿಕ ಸ್ಟ್ರಿಂಗ್ ಥಿಯರಿಯ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದು, ಮೂಲಭೂತ ಭೌತಶಾಸ್ತ್ರದ ಕುರಿತ ತಿಳುವಳಿಕೆಯನ್ನು ಮತ್ತಷ್ಟು ವಿಸ್ತರಿಸಿವೆ.
ಸ್ಟಾಕ್ಹೋಮ್ ವಿಶ್ವವಿದ್ಯಾಲಯ ಮತ್ತು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ನ ಭೌತಶಾಸ್ತ್ರ ವಿಭಾಗದ ನೊಬೆಲ್ ಸಮಿತಿಯು ಜಂಟಿಯಾಗಿ ಆಸ್ಕರ್ ಕ್ಲೈನ್ ಪದಕವನ್ನು ಪ್ರದಾನ ಮಾಡುತ್ತದೆ. ಭೌತಶಾಸ್ತ್ರ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ವಿಜ್ಞಾನಿಗಳನ್ನು ಗುರುತಿಸಿ ಈ ಪದಕವನ್ನು ನೀಡಲಾಗುತ್ತದೆ.
ಈ ಪ್ರತಿಷ್ಠಿತ ಗೌರವವು ಪ್ರೊ. ಅಶೋಕ್ ಸೇನ್ ಅವರ ಸಾಧನೆಗಳ ಪಟ್ಟಿಗೆ ಮತ್ತೊಂದು ಗರಿಯನ್ನು ಸೇರಿಸಿದೆ. 2012ರಲ್ಲಿ ಅವರು ಮೂಲಭೂತ ಭೌತಶಾಸ್ತ್ರದ ಬ್ರೇಕ್ಥ್ರೂ ಪ್ರಶಸ್ತಿ ಹಾಗೂ 2014ರಲ್ಲಿ ಡಿರಾಕ್ ಪದಕವನ್ನು ಪಡೆದಿದ್ದರು. ಅಲ್ಲದೆ, 2001ರಲ್ಲಿ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.