ಕಲಾವಿದರಿಗೆ ಆರ್ಥಿಕ ಸಂಕಷ್ಟ ಕಾಡುತ್ತಿದೆ: ಜಯಾನಂದ ಮಾದರ
ಲೋಕದರ್ಶನ ವರದಿ
ಗೋಕಾಕ 06: ದೇಶೀಯ ಕಲೆಯನ್ನು ಸಂರಕ್ಷಿಸುವಲ್ಲಿ ಇಂದಿನ ಜನಾಂಗ ಆಸಕ್ತಿ ತೋರಬೇಕಿದೆ. ಇಂದು ರಂಗಭೂಮಿ ಹಾಗೂ ಇತರ ಜಾನಪದ ಕಲಾವಿದರಿಗೆ ಆರ್ಥಿಕ ಸಂಕಷ್ಟ ಕಾಡುತ್ತಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಪ್ರಾ. ಜಯಾನಂದ ಮಾದರ ಹೇಳಿದರು.
ಅವರು ಸಮೀಪದ ಉದಗಟ್ಟಿಯ ಉದ್ದಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಶ್ರೀ ಕೃಷ್ಣ ಪಾರಿಜಾತ ಬಯಲಾಟ ಕಲಾವಿದರನ್ನು ಸನ್ಮಾನಿಸಿ ಮಾತನಾಡುತ್ತಾ ಪಾರಿಜಾತದ ಪ್ರಥಮ ನಟಿ ಕೌಜಲಗಿ ನಿಂಗಮ್ಮಳ ಕಾಲದಿಂದಲೂ ಈ ನೆಲದಲ್ಲಿ ದೇವಿ ಆರಾಧನೆಯ ನಿಮಿತ್ಯ ಈ ಬಯಲಾಟ ಕಲೆಯನ್ನು ಪ್ರದರ್ಶಿಸುತ್ತಾ ಬಂದಿರುವ ಕಲಾವಿದರ ಬದುಕು ಧನ್ಯ ಎಂದರು.
ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪೂರದ ರಾಘವೇಂದ್ರ ಶ್ರೀಕೃಷ್ಣ ಪಾರಿಜಾತ ಕಂಪನಿ ಮಾಲೀಕರಾದ ರೇಣುಕಾಬಾಯಿ ಮಾಲಾಪೂರ ಸನ್ಮಾನ ಸ್ವೀಕರಿಸಿ, ಜೀವ ಇರುವವರೆಗೂ ಕಲಾ ಸೇವೆ ಮಾಡುವುದೇ ನಮ್ಮ ಗುರಿಯಾಗಿದೆ. ಕೌಜಲಗಿ ನಿಂಗಮ್ಮ ತಾಯಿಯವರು ಉದ್ದಮ್ಮದೇವಿಯ ಸನ್ನಿಧಾನದಲ್ಲಿ ಶ್ರೀ ಕೃಷ್ಣ ಪಾರಿಜಾತ ನಾಟಕವನ್ನು ಪ್ರತಿ ಯುಗಾದಿಯ ಅಮಾವಾಸ್ಯೆ ದಿನ ಉಸಿರಿರುವವರೆಗೂ ಆಡುವೆನೆಂದು ಪ್ರಮಾಣ ಮಾಡಿ ಸೇವೆಗೈದರು. ಅದೇ ಪರಂಪರೆಯನ್ನು ಅವಳ ಶಿಷ್ಯೆ ಚಂದ್ರವ್ವಾ ಎಂಬುವವಳು ನಡೆಸಿಕೊಂಡು ಬಂದರು. ಈಗ ನಾನು ಅಲ್ಲೊಂದು ಇಲ್ಲೊಂದು ಹಳ್ಳಿಯಿಂದ ಕಲಾವಿದರನ್ನು ಒಗ್ಗೂಡಿಸಿ ಕಂಪನಿ ಕಟ್ಟಿಕೊಂಡು ಇಲ್ಲಿಗೆ ಬಂದು ಪ್ರತಿ ವರ್ಷ ತಪ್ಪದೆ ಆಟ ಆಡುತ್ತಾ ಇಂದಿಗೆ ನಲವತ್ತು ವರ್ಷ ಕಳೆದಿವೆ ಎಂದು ಹೇಳಿದರು.
ನಂತರದಲ್ಲಿ ಸತ್ಯಭಾಮೆ ಪಾತ್ರದಲ್ಲಿ ಶಿರೋಳದ ಮಲ್ಲಮ.್ಮ ಹುಗ್ಗೆಣ್ಣವರ ಗೌಳಗಿತ್ತಿ ಪಾತ್ರದಲ್ಲಿ ಕೇಸರಗೋಪ್ಪದ ಸುಗಂಧಾ ಮಾದರ, ರುಕ್ಮೀಣಿ ಪಾತ್ರದಲ್ಲಿ ಜಾಲಿಕಟ್ಟಿ ರಾಮವ್ವಾ ಮಾದರ, ಶ್ರೀ ಕೃಷ್ಣ ಪಾತ್ರದಲ್ಲಿ ಗೊಲಬಾವಿ ಲಕ್ಷ್ಮಣ ಸೊರಗಾವಿ ನಟಿಸಿದರು. ಹಾರ್ಮೋನಿಯಂ ಸಾಥ್ ಚಿಮ್ಮಡದ ಪ್ರಕಾಶ ಗುರವ ಹಾಗೂ ತಬಲಾ ಸಾಥ್ ಪರ್ಪ ಕುಂಬಾರ ನೀಡಿದರು. ತುಳಸಿಗೇರಿಯ ಚಿನ್ನಪ್ಪ ಕಪರೇಶಿ, ಉತ್ತೂರ ಶಿವಲಿಂಗಪ್ಪಾ ನಾವಿ ಭಾಗವತರಾಗಿದ್ದರು. ಹಿನ್ನೆಲೆ ಗಾಯಕರಾಗಿ ಸವಸುದ್ದಿ ಮೀರಾಸಾಬ ನದಾಫ ಹಂದಿಗುಂದದ ಕಾಶಪ್ಪ ಹೊಸಟ್ಟಿ ಸೇವೆ ನೀಡಿದರು.
ಜಾನಪದ ದಟ್ಟಿ ಕುಣಿತ ಕಲಾವಿದ ಹಾಗೂ ವಕೀಲ ಉದ್ದಣ್ಣ ಗೋಡೇರ ಹಾಗೂ ಕರ್ನಾಟಕ ಪ್ರಜಾ ರಕ್ಷಣಾ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ಆನಂದ ಸೋರಗಾವಿ ಉಪಸ್ಥಿತರಿದ್ದರು.