ಕಲೆ- ಕಲಾವಿದರು ದೇಶದ ಸಂಸ್ಕೃತಿಯ ಹರಿಕಾರರು: ಪ್ರೊ, ಜಿ.ಬಿ. ಬೆಳವಿಗಿ
ರಾಣೇಬೆನ್ನೂರಲ್ಲಿ ಜನ-ಮನ ರಂಜಿಸಿದ ಜನಪದ- ಸುಗಮ ಸಂಗೀತ ಕಾರ್ಯಕ್ರಮ
ರಾಣೇಬೆನ್ನೂರು 21: ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿಯ ಹರಿಕಾರರು ಆದರೆ ನಿಜ ಸಂಸ್ಕೃತಿಯ ಕಲಾವಿದರು ಪಾಚ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನೇಪತ್ಯಕ್ಕೆ ಸರಿಯುವಂತಾಗಿದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ: ಜಿ.ಬಿ. ಬೆಳವಿಗಿ ವಿಷಾದಿಸಿದರು.
ಸೋಮವಾರ ಸಂಜೆ ವೀರಭದ್ರೇಶ್ವರ ನಗರದ, ಕಾಲೇಜು ಆವರಣದಲ್ಲಿ, ಹಾವೇರಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ, ರಾಣೇಬೆನ್ನೂರು ಅನುರಾಗ ಸಂಗೀತ ಎಸ್. ಟಿ. ಮಹಿಳಾ ಕಲಾ ಸಂಸ್ಥೆ ಸಹಯೋಗದಲ್ಲಿ ನಡೆದ ಜನಪದ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತಿಹಾಸದ ಜಾನಪದ ಕಲೆಗಳು ನಮ್ಮ ನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿ ಸಾಗಿ ಬಂದಿವೆ. ಪರಂಪರಾಗತ ಕಲೆ ಮತ್ತು ಕಲಾವಿದರು ಉಳಿಸಿ ಬೆಳೆಸಿಕೊಳ್ಳಬೇಕಾದ ಇಂದಿನ ಅಗತ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕಾಲೇಜು ಪ್ರಾಚಾರ್ಯ ಎಚ್. ಎಂ. ದೊಡ್ಡಬಿಲ್ಲ ಅವರು, ಕನ್ನಡ ಸಂಸ್ಕೃತಿ ಬಹುದೊಡ್ಡ ಸಂಸ್ಕೃತಿ. ಜಾನಪದ ಮತ್ತು ಸುಗಮ ಸಂಗೀತ ಮನುಷ್ಯನ ಮಾನಸಿಕ ವಿಕಾಸತೆಗೆ ಅತ್ಯಂತ ಸಹಾಯಕಾರಿಯಾಗಿದೆ. ಕಲಾವಿದರನ್ನು ಪೋಷಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತನ್ನ ಪ್ರಾಯೋಜಕತ್ವವನ್ನು ನೀಡುವುದರ ಮೂಲಕ ಕಲಾವಿದರ ಬದುಕಿಗೆ ದಾರಿದೀಪವಾಗಿದೆ. ಇಂತಹ ಕಲಾವಿದರನ್ನು ಮತ್ತಷ್ಟು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ತುಂಗಾಜಲ ಚೌಡೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ, ವರ್ತಕ ಶೇಖಪ್ಪ ಹೊಸಗೌಡ್ರ ಅವರು, ಇತಿಹಾಸದಲ್ಲಿ ಕಲಾವಿದರು ರಾಜರ ಆಶ್ರಯದಲ್ಲಿ ಪೋಷಿಸುತ್ತಿದ್ದರು. ಇಂದು ರಾಜಾಶ್ರಯ ಮರೆಯಾಗಿದೆ, ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆಯ ಜೊತೆಗೆ, ಕಲಾವಿದರ ಪರಿಪೂರ್ಣ ಪಾಲನೆ,ಪೋಷಣೆಗೆ ಜನಾಶ್ರಯದ ಬಹು ಅಗತ್ಯವಿದೆ ಎಂದರು.
ನಂತರ ನಡೆದ ಕಲಾವಿದರಾದ ಗಣೇಶ್ ಗುಡಿಗುಡಿ ಅವರು ಸಾಧನಪಡಿಸಿದ ಸುಗಮ ಸಂಗೀತ ಹಾಗೂ ಗೋವಿಂದರಾಜ ಮಾಗೋಡ ಸಂಗಡಿಗರ ಜಾನಪದ ಸಂಗೀತ ಕಾರ್ಯಕ್ರಮವು ಸಾರ್ವಜನಿಕರ ಮನತಣಿಸಿದವು. ವೇದಿಕೆಯಲ್ಲಿ ಈಶ್ವರ ಗಡಾದ, ಗಿರಿಜಾದೇವಿ ಮುಳುಗುಂದ , ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಮತ್ತಿತರ ಗಣ್ಯರು, ಉಪಸ್ಥಿತರಿದ್ದರು. ಕಲಾವಿದ ಯಲ್ಲರೆಡ್ಡಿ ತಮ್ಮಣ್ಣನವರ ಪ್ರಾರ್ಥಿಸಿದರು. ರವಿಕುಮಾರ್ ಎಂ. ಸ್ವಾಗತಿಸಿದರು. ಚಂದ್ರು ನಾಯಕ್ ಎಲ್. ನಿರೂಪಿಸಿ, ತೀರ್ಥಂಕರ್ ವಂದಿಸಿದರು. ನಾಲ್ಕು ತಾಸುಗಳ ಕಾಲ ನಡೆದ ಜಾನಪದ ಹಾಗೂ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ಹಾಗೂ ಮಾರುತಿ ನಗರದ ಕಲಾಭಿಮಾನಿಗಳು ಕಲಾ ಪ್ರೇಕ್ಷಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು