ಶಿಗ್ಗಾವ್

‘ಆಯೋಗಗಳಲ್ಲಿ ನಿಜವಾದ ಮ್ಯಾನುವೆಲ್ ಸ್ಕ್ಯಾವೆಂಜರ್‌- ಅವಲಂಬಿತರನ್ನು ನೇಮಿಸಿ’

‘ಆಯೋಗಗಳಲ್ಲಿ ನಿಜವಾದ ಮ್ಯಾನುವೆಲ್ ಸ್ಕ್ಯಾವೆಂಜರ್‌- ಅವಲಂಬಿತರನ್ನು ನೇಮಿಸಿ’

ಶಿಗ್ಗಾವಿ 11: ಕೇಂದ್ರ ಮತ್ತು ರಾಜ್ಯ ಸರಕಾರ ಸಫಾಯಿ ಕರ್ಮಚಾರಿ ಆಯೋಗಗಳಲ್ಲಿ ನಿಜವಾದ ಮ್ಯಾನುವೆಲ್ ಸ್ಕ್ಯಾವೆಂಜರ್ ಹಾಗೂ ಅವರ ಅವಲಂಬಿತರನ್ನೇ ನೇಮಿಸಿ, ಕಲ್ಯಾಣ ಕರ್ನಾಟಕ ಭಾಗದ ವ್ಯಕ್ತಿಗಳಿಗೆ ಅವಕಾಶವನ್ನು ನೀಡಬೇಕು ಎಂದು ರಾಯಚೂರಿನ ಕಲ್ಯಾಣ ಕರ್ನಾಟಕ ಮ್ಯಾನುವೆಲ್ ಸ್ಕ್ಯಾವೆಂಜರ್ ಒಕ್ಕೂಟದ ರಾಷ್ಟ್ರೀಯ ಸಮಾಜ ಸೇವಕ ಭಾಸ್ಕರ್ ಬಾಬು ಹೇಳಿದರು. 

ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದ ಭಂಗಿ ಜನಾಂಗಕ್ಕೆ ಸೇರಿದವರನ್ನು ಪರಿಶಿಷ್ಟ ಜಾತಿಗೆ ಸಂಬಂಧಿಸಿದ ವಿಧಾನ ಪರಿಷತ್ ಸದಸ್ಯರ ಸ್ಥಾನವನ್ನು ನೀಡಿ ನಾಮ ನಿರ್ದೇಶನ ನೇಮಕ ಮಾಡಬೇಕು, ರಾಜ್ಯದ ಎಲ್ಲಾ ನಗರ ಸಭೆಗಳಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ ಅವಲಂಬಿತಪಟ್ಟ ಒಬ್ಬರಿಗೆ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರಲ್ಲದೇ ಈ ಜನಾಂಗವು ಸಮಾಜದಲ್ಲಿ ಗೌರಯುತವಾಗಿ ಜೀವನವನ್ನು ಸಾಗಿಸಬೇಕಾದರೆ ಭಂಗಿ ಜನಾಂಗದವರಂತೆ ವರ್ತಿಸುವ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು ಅಂದಾಗ ಮಾತ್ರ ಈ ಜನಾಂಗದ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ನ್ಯಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ನ್ಯಾಯಯುಕ್ತವಾದ ಸಮಸ್ಯೆಗಳಿಗೆ ಅನೇಕ ವಿಧಗಳಿಂದ ಅನೇಕ ಹೋರಾಟಗಳನ್ನು ಮಾಡಿದ್ದಾಗಿದೆ. ಆದರೂ ಪ್ರತಿಫಲ ಶೂನ್ಯವಾಗಿದೆ. ಕಾರಣ ಮ್ಯಾನುವೆಲ್ ಸ್ಕ್ಯಾವೆಂಜರ್ ಹಾಗೂ ಅವರ ಅವಲಂಬಿತರು ಜೀವಂತ ಬದುಕಿದ್ದು ಸತ್ತ ಹಾಗೆ ಜೀವನವನ್ನು ಕಳೆಯುತ್ತಿದ್ದಾರೆ. ನಿಮ್ಮಲ್ಲಿ ಈ ಜನಾಂಗದವರ ಬಗ್ಗೆ ಕರುಣೆಯದ್ದ ಪಕ್ಷದಲ್ಲಿ ನಮ್ಮ ಕಷ್ಟ ಸುಖಗಳ ಹಾಗೂ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಚರ್ಚಿಸಲು ತಮ್ಮ ಅಮೂಲ್ಯವಾದ ಸಮಯವನ್ನು ನಿಗಧಿಪಡಿಸಿ ಚರ್ಚೆಗೆ ಕಾಲವಕಾಶವನ್ನು ಮಾಡಿ ಕೊಡಲು ಸಿಎಂ ಬೊಮ್ಮಾಯಿಯವರಲ್ಲಿ ಅವಕಾಶ ಕೋರಿದರು. 

ಸಫಾಯಿ ಕರ್ಮಚಾರಿಗಳಿಗೆ ರಾಜಕೀಯ ಸ್ಥಾನಮಾನಗಳನ್ನ ಅನ್ಯ ಜನಾಂಗದವರಿಗೆ ನೀಡಿರುವುದರಿಂದ ಅಂಬೇಡ್ಕರ್ ಅವರ ಸಂವಿಧಾನ ಬದ್ದ ಹಕ್ಕು ಹಗಲು ದರೋಡೆಯಾಗಿದ್ದು ವಂಚನೆಗೊಳಗಾದ ಜನಾಂಗಕ್ಕೆ ರಾಜಕೀಯವಾಗಿ ಪ್ರೋತ್ಸಾಹಿಸಿ ನ್ಯಾಯ ಒದಗಿಸಬೇಕು,  ಒಂದು ವೇಳೆ ಈ ನ್ಯಾಯಯುತ್ತ ಮ್ಯಾನುವೆಲ್ ಸ್ಕ್ಯಾವೆಂಜರ್ ಹಾಗೂ ಅವರ ಅವಲಂಬಿತರ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸದೇ ಇದ್ದ ಪಕ್ಷದಲ್ಲಿ ಮುಂದೆ ಶೋಷಿತ ವರ್ಗದವರು ಮತ್ತು ಅನ್ಯಾಯಕ್ಕೆ ಒಳಗಾದವರು ಕೂಡಿ ಪ್ರತ್ಯೇಕ ರಾಜ್ಯಕ್ಕಾಗಿ ವಿನೂತನ ಹೋರಾಟ ಅನಿವಾರ್ಯವಾಗುತ್ತದೆ ಎಂದು ಸಹಿತ ತಿಳಿಸಿದರು. 

ಉಡಚಪ್ಪ ಮಾಳಗಿ, ಬಾಬಕ್ಕ ಬಳ್ಳಾರಿ, ಹನುಮಂತ ಬಂಡಿವಡ್ಡರ ಮಾತನಾಡಿದರು. ಮಾಲತೇಶ ಯಲ್ಲಾಪೂರ, ಶಿವಾನಂದ ಬೆಳಗಲಿ, ಸಿದ್ದಪ್ಪ ಮಣಕಟ್ಟಿ, ಲಕ್ಷ್ಮವ್ವ ಹರಿಜನ, ನಿಂಗಪ್ಪ ಡೊಳ್ಳೇಶ್ವರ, ರಮೇಶ ಚೌಹಾಣ್, ಮಂಜುನಾಥ ಓಲೇಕಾರ, ಶಕುಂತಲಾ ಮಾದರ, ವಾಯ್ ಎನ್ ಮಾಸೂರ, ರೇಣುಕಾ ಮಾದರ ಸೇರಿದಂತೆ ಒಕ್ಕೂಟದ ಪಧಾಧಿಕಾರಿಗಳು ಇದ್ದರು. 


ಸುದ್ದಿ ಓದಿ