ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ಕೋರಿ ಮನವಿ
ಅಥಣಿ 31: ಬಿಜೆಪಿ ಸರಕಾರದ ರಚನೆಗೆ ಕಾರಣರಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಪಕ್ಷದ ಕೇಂದ್ರ ಹಾಗೂ ರಾಜ್ಯ ಮುಖಂಡರನ್ನು ಅಥಣಿ ಹಾಗೂ ಕಾಗವಾಡ ತಾಲೂಕುಗಳ ಮರಾಠಾ ಸಮಾಜದ ಮುಖಂಡರು ಸಭೆ ಸೇರಿ ಮನವಿ ಸಲ್ಲಿಸಿದರು.
ಶನಿವಾರ ಮರಾಠಾ ಸಮಾಜದ ಮುಖಂಡರು ಸಭೆಯಲ್ಲಿ ಮಾತನಾಡಿದ ಸಮಾಜದ ಮುಖಂಡ ಪ್ರಭಾಕರ ಚವ್ಹಾಣ, ಶ್ರೀಮಂತ ಪಾಟೀಲರು ಶಾಸಕರಾಗಿ ಆಯ್ಕೆಯಾದ ನಂತರ ಕಾಗವಾಡ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಲ್ಲದೆ ಅವರ ಸತತ ಪ್ರಯತ್ನದ ಫಲವಾಗಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯನ್ನು ಮುಕ್ತಾಯದ ಹಂತಕ್ಕೆ ತಲುಪಿದ್ದು , ಈ ಸಂದರ್ಭದಲ್ಲಿ ಶ್ರೀಮಂತ ಪಾಟೀಲರಿಗೆ ಸಚಿವ ಸ್ಥಾನ ಕಲ್ಪಸಿದಲ್ಲಿ ಮಾತ್ರ ಗಡಿ ಭಾಗದ ಕಾಗವಾಡ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಕ್ಷತ್ರಿಯ ಮರಾಠಾ ಮಾಹಾ ಒಕ್ಕೂಟದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಭಾವುಸಾಹೇಬ ಮಾತನಾಡಿ, ಮರಾಠಾ ಸಮಾಜ ಹಿಂದಿನಿಂದಲೂ ಕೂಡ ಹಿಂದು ಸಮಾಜದ ಬೆನ್ನೆಲುಬಾಗಿ ನಿಂತಿದೆ ಅಲ್ಲದೆ ಪ್ರಾರಂಭದಿಂದಲೂ ಕೂಡ ಮರಾಠಾ ಸಮಾಜದ ಹಿರಿಯರಾದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಇವರಿಗೆ ಸಚಿವ ಸ್ಥಾನ ಕಲ್ಪಿಸಿ ಗೌರವಿಸಬೇಕೆಂದು ಆಗ್ರಹಿಸಿದರು.
ಮಾಜಿ ಪುರಸಭಾ ಸದಸ್ಯ ಅವಿನಾಶ ಜಾಧವ ಮಾತನಾಡಿ, ಸಕಲರನ್ನೂ ಒಂದೇ ವೇದಿಕೆಯಲ್ಲಿ ಸಂಘಟಿಸಿ ಬಿಜೆಪಿಯನ್ನು ಮುನ್ನಡೆಸುತ್ತಿರುವ ಶ್ರೀಮಂತ ಪಾಟೀಲರಿಗೆ ಮಂತ್ರಿಸ್ಥಾನ ಕೊಡುವ ಮೂಲಕ ಇಡೀ ಮರಾಠಾ ಸಮುದಾಯವನ್ನು ಗೌರವಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮರಾಠಾ ಸಮಾಜದ ಸಂದೀಪ ಪಾಟೀಲ, ಸಿದ್ದು ಪಾಟೀಲ, ಸಚೀನ ದೇಸಾಯಿ, ಮಾರುತಿ ಜಾಧವ, ಶಿವಕುಮಾರ ಜಾಧವ, ಸುಭಾಷ ಭೋಜಣೆ, ಸುಧೀರ ಜಾಧವ, ಸುಶಾಂತ ಸಾಳುಂಕೆ, ವಿಕ್ರಾಂತ ಡೊಂಗ್ರೆ, ಬಾಬಾಸಾಹೇಬ ಖೋತ, ಸಂಜೀವ ಶಿಂಧೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.